
ತುಮಕೂರು: ರಾಜ್ಯ ರಾಜಕಾರಣ ಸೇರಿದಂತೆ ಇಡೀ ದೇಶದಲ್ಲಿಯೇ ತೀವ್ರ ಸಂಚಲನ ಸೃಷ್ಟಿಸಿರುವ ‘ಮತದಾರರ ಪಟ್ಟಿ ಅಕ್ರಮ’ದ ಆರೋಪಕ್ಕೆ ಸಂಬಂಧಿಸಿದಂತೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮದೇ ಸರ್ಕಾರದ ವೈಫಲ್ಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, “ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ವೋಟರ್ ಲಿಸ್ಟ್ ಅಕ್ರಮ ನಡೆದಿದೆ. ಇದನ್ನು ಆಗಲೇ ಗಮನಿಸದೆ ಈಗ ಮಾತನಾಡುತ್ತಿರುವುದು ನಮಗೆ ನಾಚಿಕೆಯಾಗಬೇಕು,” ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಚಾಟಿ ಬೀಸಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, “ಮತ ಕಳ್ಳತನ ಆಗಿರುವುದು ನೂರಕ್ಕೆ ನೂರು ಸತ್ಯ. ಆದರೆ, ಈ ಅಕ್ರಮಗಳು ನಡೆದಿದ್ದು ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ನಮ್ಮ ಕಣ್ಮುಂದೆಯೇ ಇಷ್ಟೆಲ್ಲಾ ನಡೆದರೂ ನಾವೇಕೆ ಕಣ್ಮುಚ್ಚಿ ಕುಳಿತಿದ್ದೆವು? ನಮ್ಮ ಈ ನಿರ್ಲಕ್ಷ್ಯದಿಂದ ನಮಗೆ ಅವಮಾನವಾಗಬೇಕು,” ಎಂದು ಬೇಸರ ವ್ಯಕ್ತಪಡಿಸಿದರು.
ಮಹದೇವಪುರದಲ್ಲಿ ನಡೆದಿದ್ದೇನು?
ರಾಜಣ್ಣ ಬಿಚ್ಚಿಟ್ಟ ಸತ್ಯಬೆಂಗಳೂರಿನ ಮಹದೇವಪುರ ಕ್ಷೇತ್ರದ ಉದಾಹರಣೆ ನೀಡಿದ ಅವರು, “ಅಲ್ಲಿ ದೊಡ್ಡ ಮಟ್ಟದಲ್ಲಿ ಮೋಸ ನಡೆದಿದೆ. ಒಬ್ಬನೇ ವ್ಯಕ್ತಿ ಮೂರು-ನಾಲ್ಕು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾನೆ. ಕೇವಲ 10-15 ಜನ ವಾಸವಿರುವ ವಿಳಾಸದಲ್ಲಿ 60ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಸೇರಿಸಲಾಗಿದೆ. ಇವರಲ್ಲಿ ಕೆಲವರಿಗೆ ತಂದೆ ಹೆಸರಿಲ್ಲ, ಸರಿಯಾದ ವಿಳಾಸವೂ ಇಲ್ಲ. ಇಂತಹ ಅಕ್ರಮಗಳನ್ನು ಮಾಡಿ, ಮತದಾರರ ಪಟ್ಟಿಯನ್ನೇ ಬದಲಾಯಿಸಿ ಅವರು ಪ್ರಧಾನಿಯಾದರು. ಇದು ಕಟು ಸತ್ಯ,” ಎಂದು ಗಂಭೀರ ಆರೋಪ ಮಾಡಿದರು.
“ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ನಾವು ಆಕ್ಷೇಪಣೆ ಸಲ್ಲಿಸಬೇಕಿತ್ತು. ನಮ್ಮ ಎಚ್ಚರಿಕೆಯ ಕೊರತೆಯಿಂದಲೇ ಇದೆಲ್ಲಾ ನಡೆದಿದೆ. ಇನ್ನಾದರೂ ನಾವು ಪಾಠ ಕಲಿಯಬೇಕು,” ಎಂದು ಅವರು ಹೇಳಿದರು.
ಹಾಸನ ಉಸ್ತುವಾರಿ ಬದಲಾವಣೆ: ‘ಸಿಎಂ ನಿರ್ಧಾರಕ್ಕೆ ಸಂತೋಷವಿದೆ’
ಇದೇ ವೇಳೆ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, “ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರ ತೀರ್ಮಾನದಿಂದ ನನಗೆ ಸಂತೋಷವಾಗಿದೆ. ಎರಡು ತಿಂಗಳ ಹಿಂದೆಯೇ ನಾನು ಉಸ್ತುವಾರಿಯಿಂದ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಯನ್ನು ಸಿಎಂ ಪುರಸ್ಕರಿಸಿದ್ದಾರೆ. ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ, ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹ,” ಎಂದು ಸ್ಪಷ್ಟಪಡಿಸಿದರು.
