ಬೆಂಗಳೂರು: “ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivkumar) ಅವರು ಹೇಳಿದರು.
ನಗರದ ಕೆಪಿಸಿಐ ಸಭಾಂಗಣದಲ್ಲಿ ನಡೆದ ಕೆ.ಎಂ.ರಘು ಡೈರೆಕ್ಟರ್ ಅವರು ಬರೆದಿರುವ ‘ಡಿ.ಕೆ.ಶಿವಕುಮಾರ’ (‘DK Shivkumar) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್ ಗೆ ಕರೆದುಕೊಂಡು ಬಂದೆ. ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್ ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ನನ್ನ ಜೊತೆ ಡಿ.ಕೆ. ಸುರೇಶ್ ಅವರೂ ಇದ್ದರು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂದು ಆಯ್ಕೆ ನೀಡಿದರು” ಎಂದು ತಿಳಿಸಿದರು.
ಇದನ್ನೂ ಓದಿ: ದಂತ ವೈದ್ಯರ ಸಾಧನೆ: 11 ಎಕರೆ ಬಂಜರು ಭೂಮಿ ‘ಮಿನಿ ಅರಣ್ಯ’ವಾಗಿ ಪರಿವರ್ತನೆ
“ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ(Rajiv Gandhi) ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ” ಎಂದರು.
ಶಾಲಾ ಚುನಾವಣೆಯಲ್ಲಿಯೇ ಅನೇಕ ಒತ್ತಡಗಳಿಂದ ನನಗೆ ಬೇರೆ ಸ್ಥಾನ ನೀಡಲಾಗಿತ್ತು
“ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ನಾಯಕನಾಗಬೇಕು ಎನ್ನುವ ಅಭಿಲಾಷೆ ಹೊಂದಿದ್ದವನು. ಮೌಂಟ್ ಕಾರ್ಮೆಲ್ ಶಾಲಾ ಚುನಾವಣೆಯಲ್ಲಿ ಗೆದ್ದಿದ್ದ ನನಗೆ ಅಂದೇ ಅನೇಕ ಒತ್ತಡಗಳಿಂದ ಪ್ರತ್ಯೇಕ ಸ್ಥಾನ ನೀಡಲಾಯಿತು” ಎಂದು ತಿಳಿಸಿದರು.
“ಚುನಾವಣೆಯ ಕೌಂಟಿಂಗ್ ಪ್ರತಿನಿಧಿಯಾಗಿದ್ದ ನನ್ನ ಸಹಪಾಠಿ ಮಾಧವ ನಾಯಕ್ ನೀನು 400 ಮತಗಳಿಂದ ಗೆಲ್ಲುತ್ತೀಯಾ ಎಂದಿದ್ದನು. ಆದರೆ ಬೆಳಿಗ್ಗೆ ಫಲಿತಾಂಶ ಘೋಷಣೆ ಮಾಡುವಾಗ ಬೇರೆ ಯಾವುದೋ ಹುಡುಗಿಯ ಹೆಸರನ್ನು ಘೋಷಣೆ ಮಾಡಲಾಯಿತು. ನನಗೆ ಪ್ರತ್ಯೇಕವಾಗಿ ಕ್ರೀಡಾ ಕಾರ್ಯದರ್ಶಿ ಹುದ್ದೆ ನೀಡಲಾಯಿತು” ಎಂದರು.
“ರಾಜಕಾರಣದಲ್ಲಿಯೂ ಸುಮಾರು ಶೇ.80 ರಷ್ಟು ಜನ ದುಡಿಯುತ್ತಲೇ ಇದ್ದಾರೆ. ಶೇ. 20 ರಷ್ಟು ಜನರಿಗೆ ಮಾತ್ರ ಸಣ್ಣಪುಟ್ಟ ಸ್ಥಾನಮಾನ ಸಿಕ್ಕಿದೆ. ನನಗೂ 63 ವರ್ಷವಾಯಿತು. ನಾವುಗಳೇ ಇನ್ನೆಷ್ಟು ದಿನ ರಾಜಕಾರಣ ಮಾಡಲು ಸಾಧ್ಯ. ಹೊಸಬರು ಬರಬೇಕು. ಐದು ಪಾಲಿಕೆಗಳು ಮಾಡಿದ ಕಾರಣಕ್ಕೆ ಬೆಂಗಳೂರಿನಲ್ಲಿ ಹೊಸದಾಗಿ 500 ಕ್ಕೂ ಹೆಚ್ಚು ನಾಯಕರು ಬೆಳಕಿಗೆ ಬರಲಿದ್ದಾರೆ” ಎಂದು ಡಿ ಕೆ ಶಿವಕುಮಾರ್(DK Shivkumar) ತಿಳಿಸಿದರು
ನಾನು ರಾಜೀವ್ ಗಾಂಧಿ ಅವರ ಮಾತಿನ ಮೇಲೆ ನಂಬಿಕೆ ಇಟ್ಟವನು
“ಈ ಪುಸ್ತಕ ರಾಜಕೀಯದಲ್ಲಿ ಬೆಳೆಯಬೇಕು ಎನ್ನುವವರಿಗೆ ಒಂದಷ್ಟು ಮಾರ್ಗದರ್ಶನ ನೀಡಬಹುದು. ಏಕೆಂದರೆ ನಾನು ರಾಜೀವ್ ಗಾಂಧಿ ಅವರ ಮಾತಿನ ಮೇಲೆ ನಂಬಿಕೆ ಇಟ್ಟವನು. ಹಿಂಬಾಲಕರನ್ನ ಸೃಷ್ಟಿಸಬೇಡಿ ನಾಯಕರನ್ನು ಸೃಷ್ಟಿಸಿ ಎನ್ನುವ ಮಾತನ್ನು ಹೆಚ್ಚು ನಂಬುವವನು” ಎಂದರು.
“ನಾನು ಇಷ್ಟು ಎತ್ತರಕ್ಕೆ ಬೆಳೆಯಲು ನನ್ನ ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಕಾರಣ. ತಿಹಾರ್ ಜೈಲಿಗೆ ನನ್ನ ಮೇಲೆ ಷಡ್ಯಂತ್ರ ಮಾಡಿ ಕಳುಹಿಸಿದಾಗಲೂ ಈ ಜನ ನನ್ನ ಜೊತೆ ನಿಂತಿದ್ದಾರೆ. ಲಕ್ಷಾಂತರ ಜನರು, ತಾಯಂದಿರು ಹರಕೆ ಕಟ್ಟಿಕೊಂಡು ನನ್ನ ಪರವಾಗಿ ಪ್ರಾರ್ಥನೆ ಮಾಡಿದ್ದರು. ಎಲ್ಲರ ಹರಕೆ, ಹಾರೈಕೆಯಿಂದ ನಾನು ನಿಮ್ಮ ಮುಂದೆ ನಿಂತಿದ್ದೇನೆ” ಎಂದು ಹೇಳಿದರು.(DK Shivkumar)
ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುವೆ
“ಟೀಕೆಗಳನ್ನು ಮುಕ್ತವಾಗಿ ನಾನು ಸ್ವೀಕಾರ ಮಾಡುತ್ತೇನೆ. ಸ್ನೇಹಿತರು ಟೀಕೆ ಮಾಡುತ್ತಾರೆ. ವೈರಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಸಂಗತಿಗಳನ್ನು ಕಟ್ಟಿ ಮಾತನಾಡುತ್ತಾರೆ. ಆಪಾದನೆಗಳನ್ನು ಮಾಡುತ್ತಾರೆ. ಆದರೂ ನಾನು ಸಂತೋಷದಿಂದ ಕೇಳಿಸಿಕೊಳ್ಳುತ್ತೇನೆ” ಎಂದು ತಿಳಿಸಿದರು.
“ದೇವೆಗೌಡರು, ಕುಮಾರಸ್ವಾಮಿ ವಿರುದ್ಧ ರಾಜಕೀಯ ಮಾಡಿದ್ದೇನೆ. ಜಾತ್ಯಾತೀತತೇ ಉಳಿಯಬೇಕು ಎನ್ನುವ ಕಾರಣಕ್ಕೆ, ಹೈ ಕಮಾಂಡ್ ಹೇಳಿದಕ್ಕೆ ಅವರ ಕೈ ಹಿಡಿದು ಮೇಲಕ್ಕೆತ್ತಿ ಮುಖ್ಯಮಂತ್ರಿ ಮಾಡಿದ್ದೇವೆ. ನನ್ನ ಮನಸ್ಸು ಒಪ್ಪಿತೋ ಇಲ್ಲವೋ ಬೇರೆ ವಿಚಾರ. ಆದರೆ ಪಕ್ಷದ ಮಾತಿಗೆ ನಿಷ್ಠನಾಗಿ ನಡೆದುಕೊಂಡೆ. ನಾನು ಜೈಲಿಗೆ ಹೋದ ತಕ್ಷಣ ನಾವೇನಾದರೂ ದುಡ್ಡು ಹೊಡೆಯಲು ಹೇಳಿದ್ದೆವೇಯೇ ಎನ್ನುವ ಮಾತನ್ನೂ ಇದೇ ಕಿವಿಯಲ್ಲಿ ಕೇಳಿದ್ದೇನೆ” ಎಂದರು.
