
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಕುರಿತು ಎ ಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿ ವಿವಾದ ಸೃಷ್ಟಿಸಿದ್ದ ಯೂಟ್ಯೂಬರ್ ಎಂಡಿ ಸಮೀರ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸರು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.(Dharmasthala case)
ಇದನ್ನೂ ಓದಿ: ವರ್ಷಿತಾ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ತೀವ್ರ ಆಗ್ರಹ
ಪ್ರಚೋದನಕಾರಿ ವಿಡಿಯೋದಿಂದ ವಿವಾದ
ಯೂಟ್ಯೂಬರ್ ಸಮೀರ್ ಅವರು ದೂತ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಧರ್ಮಸ್ಥಳದ ಕುರಿತು ಪ್ರಚೋದನಕಾರಿ ಎನ್ನಲಾದ ವಿಡಿಯೋವನ್ನು ಪ್ರಸಾರ ಮಾಡಿದರು. ಈ ವಿಡಿಯೋದಲ್ಲಿ ಎಐ ತಂತ್ರಜ್ಞಾನದ ಸಹಾಯದಿಂದ ಸೃಷ್ಟಿಸಲಾದ ದೃಶ್ಯಾವಳಿಗಳನ್ನ ಬಳಸಿಕೊಂಡು, ಸಾವಿರ ಜನರನ್ನು ರೇಪ್ ಮಾಡಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು ಎಂದು ಕರೆ ನೀಡಿ ಸಾರ್ವಜನಿಕರನ್ನು ಉದ್ರೇಕಿಸುವ ಉದ್ದೇಶದಿಂದ ಈ ವಿಡಿಯೋ ಮಾಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನಲ್ಲಿ ಸಮೀರ್ ಅವರು ಕಾಲ್ಪನಿಕ ಮಾಹಿತಿಗಳನ್ನ ಸೃಷ್ಟಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪ್ರಕರಣದ ಪ್ರಮುಖ ಸಾಕ್ಷಿದಾರರ ಮಾಹಿತಿ ಹಂಚಿಕೊಂಡಿರುವುದು ಸಾಕ್ಷಿಗಳ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: K L Rahul: ಏಷ್ಯಾಕಪ್ ಟಿ20 ತಂಡಕ್ಕೆ ಆಯ್ಕೆಯಾಗದಿರಲು ಇದೇ ಕಾರಣ!
ಪೊಲೀಸರಿಂದ ಬೆಂಗಳೂರಿನಲ್ಲಿ ತೀವ್ರ ಶೋಧ
ದೂರು ದಾಖಲಾಗುತ್ತಿದ್ದಂತೆಯೇ ಧರ್ಮಸ್ಥಳ ಪೊಲೀಸರು ಎಂ ಡಿ ಸಮೀರ್ ಅವರನ್ನು ವಶಕ್ಕೆ ಪಡೆಯಲು ಬೆಂಗಳೂರಿನ ಬನ್ನೇರುಘಟ್ಟದ ಗೊಲ್ಲಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಪೊಲೀಸರು ಭೇಟಿ ನೀಡಿದಾಗ ಸಮೀರ್ ಮನೆಯಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬಸ್ಥರನ್ನು ವಿಚಾರಣೆಗೊಳಪಡಿಸಿದ್ದಾರೆ.
ಸಮೀರ್ ಸೃಷ್ಟಿಸಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಹಬ್ಬಿಸಿತ್ತು. ಇದಕ್ಕೆ ಧರ್ಮಸ್ಥಳದ ಭಕ್ತರು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆಯು ಧರ್ಮಸ್ಥಳದ ಧರ್ಮ ಅಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮಾನಹಾನಿಗೆ ಕಾರಣವಾಗುವಂತಹ ಹೇಳಿಕೆಗಳನ್ನ ನೀಡಿದ್ದಾರೆ ಎಂದು ಆರೋಪಿಸಿ ಸಮೀರ್ ವಿರುದ್ಧ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಕೋರ್ಟ್ ಈ ವಿಷಯದಲ್ಲಿ ತಡೆಯಾದೆ ನೀಡಲು ನಿರಾಕರಿಸಿದರೂ, ಸಮೀರ್ ಗೆ ನೋಟಿಸ್ ಜಾರಿ ಮಾಡಿತ್ತು.
ಸದ್ಯ ಧರ್ಮಸ್ಥಳ ಪೊಲೀಸರು ಸಮೀರ್ ಬಂಧನಕ್ಕೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣ ಹೊಸ ತಿರುಗು ಪಡೆಯುವ ಸಾಧ್ಯತೆ ಇದೆ.
