
Dharmastala Case: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಯು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ವಿಶೇಷ ತನಿಖಾ ತಂಡದ (SIT) ಮುಂದೆ ಮತ್ತೊಂದು ಗಂಭೀರ ದೂರು ದಾಖಲಾಗಿದೆ. 2010ರಲ್ಲಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು ಮುಚ್ಚಿಹಾಕಿ, ಆಕೆಯ ಶವವನ್ನು ತರಾತುರಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಯಂತ್ ಅವರು ದೂರು ನೀಡಿದ್ದಾರೆ.
ಇದನ್ನೂ ಓದಿ: KSCA ಗೆ ಮಾಜಿ ಕ್ರಿಕೆಟಿಗನ ಎಂಟ್ರಿ: ಚುನಾವಣೆಗೆ ಸ್ಪರ್ಧಿಸಲು ರೆಡಿಯಾದ ಭಾರತದ ಮಾಜಿ ವೇಗಿ
ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಖುದ್ದು ಭೇಟಿ ನೀಡಿ ದೂರು ಸಲ್ಲಿಸಿದ ನಂತರ ಜಯಂತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ಏಪ್ರಿಲ್ 6, 2010 ರಂದು ಧರ್ಮಸ್ಥಳದ ಲಾಡ್ಜ್ ಒಂದರಲ್ಲಿ ಸುಮಾರು 35-40 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಈ ಬಗ್ಗೆ ನಾನು ಮಾಹಿತಿ ಹಕ್ಕು ಕಾಯ್ದೆಯಡಿ (RTI) ದಾಖಲೆಗಳನ್ನು ಪಡೆದುಕೊಂಡಿದ್ದೇನೆ. ನನ್ನ ಬಳಿ ಇರುವ ದಾಖಲೆಗಳ ಪ್ರಕಾರ, ಇದು ಸ್ಪಷ್ಟವಾಗಿ ಕೊಲೆ. ಆದರೆ, ವ್ಯವಸ್ಥಿತವಾಗಿ ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ,” ಎಂದು ಅವರು ಗಂಭೀರ ಆರೋಪ ಮಾಡಿದರು.
ಪೊಲೀಸರ ಕಾರ್ಯವೈಖರಿಗೆ ತೀವ್ರ ಆಕ್ಷೇಪ
ಪೊಲೀಸರ ನಡೆಗಳ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ ಅವರು, “ಇದು ಕೊಲೆ ಎಂದು ಗೊತ್ತಿದ್ದರೂ, ಕೇವಲ ಒಂದೇ ದಿನದಲ್ಲಿ ಶವವನ್ನು ವಿಲೇವಾರಿ ಮಾಡಲು ಸ್ಥಳೀಯ ಪೊಲೀಸರು ಹೇಗೆ ಅನುಮತಿ ನೀಡಿದರು? ಮರಣೋತ್ತರ ಪರೀಕ್ಷೆ ಮುಗಿದ ತಕ್ಷಣ ಅಂತ್ಯಕ್ರಿಯೆಗಾಗಿ ಶವವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದಾರೆ. ಯಾರ ಒತ್ತಡಕ್ಕೆ ಮಣಿದು, ಯಾರ ಸೂಚನೆಯ ಮೇರೆಗೆ ಈ ಪ್ರಕರಣವನ್ನು ಮುಚ್ಚಿಹಾಕಲಾಯಿತು?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ದೇವರು ಯಾರಿಗೂ ಮೋಸ ಮಾಡಿದ್ದಿಲ್ಲ, ಆದರೆ ದೇವರಿಗೇ ಮೋಸ ಮಾಡಿದವರಿದ್ದಾರೆ ನಮ್ಮಲ್ಲಿ!
160 ಅಸ್ವಾಭಾವಿಕ ಸಾವುಗಳ ರಹಸ್ಯ?
“ಆರ್ಟಿಐ ಮಾಹಿತಿಯ ಪ್ರಕಾರ, ಆ ಸಮಯದಲ್ಲಿ ಸುಮಾರು 160 ಅಸ್ವಾಭಾವಿಕ ಸಾವುಗಳು ಸಂಭವಿಸಿವೆ ಎಂಬ ಆಘಾತಕಾರಿ ಮಾಹಿತಿ ಸಿಕ್ಕಿದೆ. ಬಸ್ ನಿಲ್ದಾಣ, ಬೆಟ್ಟದ ದಾರಿಯಂತಹ ಕಡೆಗಳಲ್ಲಿ ಶವಗಳು ಪತ್ತೆಯಾಗಿವೆ. ಇವುಗಳಲ್ಲಿ ಕೆಲವು ಆತ್ಮಹತ್ಯೆ ಪ್ರಕರಣಗಳಿರಬಹುದು, ಆದರೆ ಬಹುತೇಕ ಪ್ರಕರಣಗಳಲ್ಲಿ ಸರಿಯಾದ ತನಿಖೆಯಿಲ್ಲದೆ ಶವಗಳನ್ನು ವಿಲೇವಾರಿ ಮಾಡಲಾಗಿದೆ ಎಂಬ ಗಂಭೀರ ಸಂಶಯವಿದೆ,” ಎಂದು ಜಯಂತ್ ಕಳವಳ ವ್ಯಕ್ತಪಡಿಸಿದ್ದಾರೆ.
ಜಯಂತ್ ಅವರ ಈ ಹೊಸ ದೂರು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಅನುಮಾನಾಸ್ಪದ ಸಾವುಗಳ ಹಿಂದಿನ ಸತ್ಯವನ್ನು ಹೊರತರಲು ಎಸ್ಐಟಿ ತನಿಖೆಗೆ ಮತ್ತಷ್ಟು ಒತ್ತಡ ಹೇರಿದೆ.
