Mindset:ಜಗತ್ತಿನಲ್ಲಿ ಕ್ಯಾನ್ಸರ್ ಅಥವಾ ಹೃದಯಾಘಾತಕ್ಕಿಂತಲೂ ಹೆಚ್ಚು ಜನರನ್ನು ಕೊಂದಿರುವ, ಅಥವಾ ಹೆಚ್ಚು ಕನಸುಗಳನ್ನು ಸಮಾಧಿ ಮಾಡಿರುವ ಒಂದು ಭಯಂಕರ ಕಾಯಿಲೆ ಇದೆ. ಆ ಕಾಯಿಲೆಯ ಹೆಸರೇ ‘ಜನ ಏನಂದುಕೊಳ್ಳುತ್ತಾರೆ?’. ನಮ್ಮ ಬದುಕಿನ ಅರ್ಧದಷ್ಟು ಆಯಸ್ಸು ನಾವು ಈ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ ಕಳೆದುಹೋಗುತ್ತದೆ. ನಾವು ಇಷ್ಟಪಟ್ಟ ಬಟ್ಟೆ ಹಾಕಿಕೊಳ್ಳಲು, ಮನಸ್ಸಿಗೆ ಇಷ್ಟವಾದ ಕೆಲಸ ಮಾಡಲು, ಅಥವಾ ನಮ್ಮದೇ ಆದ ರೀತಿಯಲ್ಲಿ ಬದುಕಲು ನಮಗೆ ಅಡ್ಡಿಯಾಗಿ ನಿಂತಿರುವುದು ಬೇರ್ಯಾರೂ ಅಲ್ಲ, ಅದು ಕಣ್ಣಿಗೆ ಕಾಣದ ಈ ಸಮಾಜದ ಟೀಕೆ ಎಂಬ ಭಯ ಮಾತ್ರ. ಈ ಮಾನಸಿಕ ರೋಗಕ್ಕೆ ನಾವೇ ಮದ್ದು ಕೊಟ್ಟುಕೊಳ್ಳದಿದ್ದರೆ, ನಮ್ಮ ಜೀವನ ಪೂರ್ತಿ ಪರರ ಮೆಚ್ಚುಗೆಗಾಗಿ ಬದುಕುಬೇಕು, ನಮ್ಮ ಇಷ್ಟದಂತೆ ಬದುಕುವುದು ನಿಲ್ಲಿಸಬೇಕಾಗುತ್ತದೆ.
ನಾವು ಯಾರ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದೇವೆಯೋ, ಆ ಜನ ಅಥವಾ ಸಮಾಜ ಎಂಬುದು ನಮ್ಮ ಕಷ್ಟಕಾಲಕ್ಕೆ ಬರುವುದಿಲ್ಲ ಎಂಬ ಕಟುಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಮನೆ ಬಾಡಿಗೆ ಕಟ್ಟುವಾಗ, ಆಸ್ಪತ್ರೆಯ ಬಿಲ್ ಕಟ್ಟುವಾಗ ಅಥವಾ ಹಸಿವಿನಿಂದ ನರಳುವಾಗ ಈ ಖಾಲಿ ಮಾತಿನ ಶಾಣ್ಯಾ ಮಂದಿ ಬಂದು ಸಹಾಯ ಮಾಡುವುದಿಲ್ಲ. ಹೀಗಿರುವಾಗ, ನಮ್ಮ ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಅವರಿಗೇಕೆ ಕೊಡಬೇಕು? ವಿಚಿತ್ರವೆಂದರೆ, ಜನರು ನಿಮ್ಮ ಬಗ್ಗೆ ಮಾತನಾಡುವುದು ಕೇವಲ ಎರಡು ದಿನ ಮಾತ್ರ. ನೀವು ಸೋತಾಗ ಲೇವಡಿ ಮಾಡುವವರೇ, ನೀವು ಗೆದ್ದಾಗ ಹಾರ ಹಾಕುತ್ತಾರೆ. ಜನರ ಮಾತುಗಳು ಗಾಳಿಯಂತೆ, ಅವು ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತವೆ. ಅಂತಹ ಉಪಯೋಗ ಇಲ್ಲದ ಮಾತುಗಳಿಗಾಗಿ ನಮ್ಮ ಅದ್ಬುತ ಬದುಕನ್ನು ಹಾಳುಮಾಡಿಕೊಳ್ಳುವುದು ಮೂರ್ಖತನ.
ನಾವು ಎಲ್ಲರನ್ನೂ ಮೆಚ್ಚಿಸಲು ಅಥವಾ ಎಲ್ಲರಿಗೂ ಒಳ್ಳೆಯವರಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದಾಗ, ನಮ್ಮತನವನ್ನು ನಾವು ನಿಧಾನವಾಗಿ ಕಳೆದುಕೊಳ್ಳುತ್ತೇವೆ. ಜಗತ್ತಿನಲ್ಲಿ ಎಲ್ಲರನ್ನೂ ಮೆಚ್ಚಿಸಲು ಯಾರಿಗೂ ಸಾಧ್ಯವಿಲ್ಲ, ಸ್ವತಃ ದೇವರಿಗೂ ಕೂಡ ಅದು ಸಾಧ್ಯವಾಗಿಲ್ಲ. ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ಅದರಲ್ಲಿಯೂ ತಪ್ಪು ಹುಡುಕುವವರು ಇದ್ದೇ ಇರುತ್ತಾರೆ. ಆನೆ ನಡೆದು ಹೋಗುವಾಗ ನಾಯಿಗಳು ಬೊಗಳಿದರೆ, ಆನೆ ತಿರುಗಿ ನೋಡದೆಯೇ ತನ್ನ ದಾರಿಯಲ್ಲಿ ಸಾಗುತ್ತದೆ. ನಾವೂ ಕೂಡ ನಮ್ಮ ಗುರಿಯತ್ತ ಗಮನಹರಿಸಬೇಕೇ ಹೊರತು, ದಾರಿಯಲ್ಲಿ ನಿಸಪ್ರಯೋಜಕರು ಮಾತನಾಡುವ ಟೀಕೆಗಳಿಗಲ್ಲ. ಯಾರು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೋ, ಅದರರ್ಥ ನೀವು ಅವರಿಗಿಂತ ಏನೋ ವಿಶೇಷವಾದುದನ್ನು ಮಾಡುತ್ತಿದ್ದೀರಿ ಎಂದೇ ಅರ್ಥ.
ಈ ರೋಗಕ್ಕೆ ಇರುವ ಒಂದೇ ಒಂದು ಮದ್ದು ಎಂದರೆ “ನನ್ನ ಬದುಕು, ನನ್ನ ಜವಾಬ್ದಾರಿ” ಎಂಬ ದೃಢ ನಿರ್ಧಾರ. ನಿಮ್ಮ ಮನಸ್ಸಿಗೆ ಮತ್ತು ಆತ್ಮಸಾಕ್ಷಿಗೆ ಯಾವುದು ಸರಿಯೆಂದು ಅನ್ನಿಸುತ್ತದೆಯೋ ಅದನ್ನು ಧೈರ್ಯವಾಗಿ ಮಾಡಿ. ಒಮ್ಮೆ ನೀವು ಜನರ ಮಾತುಗಳನ್ನು ಕಡೆಗಣಿಸಿ ಮುನ್ನಡೆಯಲು ಆರಂಭಿಸಿದರೆ, ನಿಮಗೆ ಸಿಗುವ ಮಾನಸಿಕ ಸ್ವಾತಂತ್ರ್ಯ ಅಷ್ಟಿಷ್ಟಲ್ಲ. ನಿಮ್ಮ ಸಂತೋಷದ ಕೀಲಿ ಕೈಯನ್ನು ಬೇರೆಯವರ ಜೇಬಿನಲ್ಲಿ ಇಡಬೇಡಿ. ಬದುಕು ಇರುವುದು ಒಂದೇ ಬಾರಿ, ಅದು ಮುಗಿಯುವ ಮುನ್ನ “ಅಯ್ಯೋ, ನಾನು ಅಂದುಕೊಂಡಂತೆ ಬದುಕಲೇ ಇಲ್ಲವಲ್ಲ” ಎಂಬ ಪಶ್ಚಾತ್ತಾಪ ಬರುವ ಬದಲು, ಇಂದೇ ಈ ರೋಗದಿಂದ ಮುಕ್ತರಾಗಿ.
ನಿಮ್ಮ ಬಗ್ಗೆ ಜನ ಏನು ಅಂದುಕೊಳ್ಳುತ್ತಾರೆ ಎಂಬುದು ನಿಮ್ಮ ಸಮಸ್ಯೆಯಲ್ಲ, ಅದು ಅವರ ಸಮಸ್ಯೆ. ಅವರ ಬಾಯಿಗೆ ಬೀಗ ಹಾಕಲು ಸಾಧ್ಯವಿಲ್ಲ, ಆದರೆ ನಮ್ಮ ಕಿವಿಗೆ ಹತ್ತಿ ಇಟ್ಟುಕೊಳ್ಳಲು ಸಾಧ್ಯವಿದೆ. ಯಾವಾಗ ನೀವು “ಜನ ಏನಾದರೂ ಅಂದುಕೊಳ್ಳಲಿ, ನನಗೇನು?” ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತೀರೋ, ಅಂದೇ ನೀವು ನಿಜವಾದ ಅರ್ಥದಲ್ಲಿ ಬದುಕಲು ಆರಂಭಿಸುತ್ತೀರಿ.
ಆದರೆ ಇದರ ಮಧ್ಯದಲ್ಲಿ ನಾವು ಜನರ ಮಾತಿಗೆ ಕಿವಿಗೋಡದೆ ಬದುಕುಬೇಕೆಂದರೆ, ಗುರಿ ಮುಟ್ಟುವ ತವಕದಲ್ಲಿ, ಗುರಿ ಮುಟ್ಟಲು ಮಾಡಬೇಕಾದ ಕೆಲಸವನ್ನು ಮರೆಯಬಾರದು ಹಾಗೂ ನ್ಯಾಯಯುತವಾಗಿ ಪ್ರಾಮಾಣಿಕತೆಯಿಂದ ಬದಕಲು ಕೂಡ ಕಲಿಯಬೇಕು. ಜನರು ಏನೇ ಮಾತನಾಡಿದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಮಾತ್ರಕ್ಕೆ ಅಪ್ರಾಮಾಣಿಕವಾಗಿ ಬದುಕಬೇಡಿ. ಕೊನೆಯದಾಗಿ ಹೇಳುವುದೇನೆಂದರೆ, ನೀವು ನಿಮ್ಮ ಸ್ವತಂತ್ರಕ್ಕೆ ಅಡ್ಡಿ ಮಾಡುವಂತ ಊರಿನ ಆ ನಾಲ್ಕು ಜನರ ಮಾತಿಗೆ ತಲೆ ಕೊಡಬೇಡಿ.(Mindset)
- ಜಿ. ಎಸ್. ಶರಣು
