- ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕಾ ಪಡೆ
- ಶಾಸಕ ಸುರೇಶ್ ಬಾಬು ಪ್ರಶ್ನೆಗೆ ಸಚಿವರ ಉತ್ತರ
- ಅಂತರ-ಇಲಾಖೆ ಸಹಯೋಗ: ಬಾಲ್ಯ ವಿವಾಹ ತಡೆಗೆ ಹೊಸ ಕಾರ್ಯತಂತ್ರ
ಬೆಂಗಳೂರು: ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗನ್ನು ಬೇರುಮಟ್ಟದಿಂದಲೇ ಕಿತ್ತೊಗೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ(Strict Action to Prevent Child Marriage) ಈ ಪಿಡುಗನ್ನು ಕೊನೆಗೊಳಿಸಲು ಎಲ್ಲರ ಸಹಕಾರವೂ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್(Lakshmi Hebbalkar) ತಿಳಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಸಮುದಾಯಗಳಲ್ಲಿನ ಪದ್ಧತಿಗಳಿಂದಾಗಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಇದರಿಂದ ಬಾಲ ಗರ್ಭಿಣಿಯರ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನು ಓದಿ: ಸ್ವಾತಂತ್ರ್ಯ ದಿನದ ಮಾಂಸ ನಿಷೇಧಕ್ಕೆ ದೇಶದಾದ್ಯಂತ ವಿರೋಧ: ಏನು ತಿನ್ನಬೇಕು ಅನ್ನೋದು ನಮ್ಮ ಹಕ್ಕು
ಬಾಲ್ಯ ವಿವಾಹ ತಡೆಗಟ್ಟಲು ಈಗಾಗಲೇ ಕಾಯ್ದೆ ಜಾರಿಯಲ್ಲಿದೆ. ಇದರ ಜೊತೆಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ (CWC) ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 4 ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು CWC ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಅಂತರ-ಇಲಾಖೆ ಸಹಯೋಗ: ಬಾಲ್ಯ ವಿವಾಹ ತಡೆಗೆ ಹೊಸ ಕಾರ್ಯತಂತ್ರ
ಬಾಲ್ಯ ವಿವಾಹ ತಡೆಗಟ್ಟಲು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದು ಅವಶ್ಯಕ. ಇದಕ್ಕಾಗಿ ಶಿಕ್ಷಣ, ಆರೋಗ್ಯ, ಗೃಹ, ಸಮಾಜ ಕಲ್ಯಾಣ, ಕಂದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಸಚಿವರು ಭರವಸೆ ನೀಡಿದರು.
ಮಕ್ಕಳ ಸುರಕ್ಷತೆಗಾಗಿ ಇರುವ ಮಕ್ಕಳ ಸಹಾಯವಾಣಿ 1098 ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಂಕಷ್ಟದಲ್ಲಿರುವ ಮಕ್ಕಳ ಬಗ್ಗೆ ಯಾವುದೇ ಮಾಹಿತಿ ಬಂದರೂ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಮಾಹಿತಿ ನೀಡಿದರು. ಇದಲ್ಲದೆ, ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಮಟ್ಟದವರೆಗೆ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಗಳನ್ನು ರಚಿಸಲಾಗಿದೆ.
ಇದನ್ನು ಓದಿ: ಬಾದಾಮಿ ಗೆಲುವಿಗೆ ಸಿದ್ದರಾಮಯ್ಯ ಹಣ ಕೊಟ್ಟರು: ಸಿ.ಎಂ.ಇಬ್ರಾಹಿಂ ಆರೋಪ, ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ
ಮಹಿಳೆಯರ ರಕ್ಷಣೆಗಾಗಿ ‘ಅಕ್ಕಾ ಪಡೆ’
ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ “ಅಕ್ಕಾ ಪಡೆ”ಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಚಿವೆ ಹೆಬ್ಬಾಳಕರ್(Lakshmi Hebbalkar) ತಿಳಿಸಿದರು. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಪಡೆಯನ್ನು ಆಗಸ್ಟ್ 15ರಿಂದ ಬೆಳಗಾವಿ, ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ತಿಳಿಸಿದರು.
