
ವೈ.ಎನ್.ಹೊಸಕೋಟೆ: ಆಂಧ್ರಪ್ರದೇಶ ಗಡಿಯ ಸಿದ್ದಾಪುರ ಸರಹದ್ದಿನಲ್ಲಿರುವ ಅನ್ನಲಪುರಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳರು ಹುಂಡಿ ಒಡೆದು ಹಣ ದೋಚಿದ ಘಟನೆ ಭಕ್ತರಲ್ಲಿ ಆಕ್ರೋಶ ಹುಟ್ಟಿಸಿದೆ.
ಶ್ರಾವಣ ಮಾಸದ ಕಾರಣ ಕಳೆದ ಮೂರು ವಾರಗಳಿಂದ ಹೆಚ್ಚಿನ ಹಣ ಸಂಗ್ರಹವಾಗಿದ್ದಿದ್ದು, ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಕಳ್ಳರು ದೇವಾಲಯ ಪ್ರವೇಶಿಸಿ ಹುಂಡಿಯಲ್ಲಿದ್ದ ನಗದು ಕಳ್ಳತನ ಮಾಡಿದ್ದಾರೆ. ಈ ದೇವಾಲಯದಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಬಾರಿ ಕಳ್ಳತನ ನಡೆದಿದ್ದು, ಪ್ರತೀ ಸಲವೂ ಕಳ್ಳರು ಪೊಲೀಸರಿಗೆ ಸಿಗದೇ ಪರಾರಿಯಾಗುತ್ತಿದ್ದಾರೆ.
ಇದನ್ನು ಓದಿ: ಸಚಿವ ಕೆ.ಎನ್. ರಾಜಣ್ಣ ಸಂಪುಟದಿಂದ ವಜಾ: ಮಧುಗಿರಿಯಲ್ಲಿ ಭುಗಿಲೆದ್ದ ಬೆಂಬಲಿಗರ ಆಕ್ರೋಶ
ಹಿಂದೆ ಉಸ್ತುವಾರಿ ಸಮಿತಿಯ ಮೂಲಕ ದೇವಸ್ಥಾನದ ಕಾರ್ಯಾಚರಣೆ ನಡೆದಿದ್ದರೂ, ಸಮಿತಿಯನ್ನು ರದ್ದುಗೊಳಿಸಿದ ಬಳಿಕ ಮುಜರಾಯಿ ಇಲಾಖೆ ಕಂದಾಯ ಇಲಾಖೆಯ ಮೂಲಕ ನಿರ್ವಹಣೆ ನಡೆಸುತ್ತಿದೆ. ಸಮಿತಿ ರದ್ದಾದ ನಂತರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಸಾರ್ವಜನಿಕರು ಮುಜರಾಯಿ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಕ್ಕದಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿಯನ್ನೂ ಹೊರಗೆ ತೆಗೆದು ಹಣ ದೋಚಿರುವ ಘಟನೆ ಕೂಡ ನಡೆದಿದೆ. ಈ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರಬಹುದೆಂದು ಭಕ್ತಾಧಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಖಾಸಗಿ ಲಾಭಕ್ಕಾಗಿ ಮೆಟ್ರೋ ಬೇಡಿಕೆ: ಮುನಿರತ್ನ ಮೇಲೆ ಡಿಕೆಶಿ ಆರೋಪ
ಹಗಲಲ್ಲೆ ದರೋಡೆ
ಗುರುವಾರದಂದು ಆಂಧ್ರಪ್ರದೇಶದ ಕನೇಕಲ್ಲು ಗ್ರಾಮದ ಯರಿಸ್ವಾಮಿ ಮತ್ತು ಕಂಬದೂರು ಗ್ರಾಮದ ಮತ್ತೊಬ್ಬರು ದ್ವಿಚಕ್ರ ವಾಹನದಲ್ಲಿ ಓಬಳಾಪುರ ದರ್ಗಾದಿಂದ ಹಿಂತಿರುಗುತ್ತಿದ್ದ ವೇಳೆ, ಮಧ್ಯಾಹ್ನ 3.30ರ ಸುಮಾರಿಗೆ ದೊಡ್ಡಹಳ್ಳಿ ರಸ್ತೆಯಲ್ಲಿ ಕಳ್ಳರು ಅವರನ್ನು ತಡೆದು 10 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಹಾಗೂ ₹10 ನಗದು ಕಿತ್ತುಕೊಂಡು ಪರಾರಿಯಾದರು.
ಅಂಗಡಿಗೂ ಕಳ್ಳರ ದಾಳಿ
ಐದು ದಿನಗಳ ಹಿಂದೆ ಬುಡ್ಡಾರೆಡ್ಡಿಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ನರಸಪ್ಪ ಅವರ ಚಿಲ್ಲರೆ ಅಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು, ಸುಮಾರು ₹40 ಸಾವಿರ ಮೌಲ್ಯದ ಸರಕು ಮತ್ತು ನಗದು ದೋಚಿದರು. ಈ ರಸ್ತೆಯೂ ಜನನಿಬಿಡವಾಗಿದ್ದರೂ, ನಿರಂತರ ಕಳ್ಳತನ ತಡೆಗಟ್ಟಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.
