
ಬೆಂಗಳೂರು: “ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆ ರಾಜಕೀಯ ವ್ಯಂಗ್ಯ-ತಿರುಗೇಟಿನ ವೇದಿಕೆಯಾಯಿತು. ಬಿಜೆಪಿ ಶಾಸಕ ಮುನಿರತ್ನ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಹಣ ಕೊಟ್ಟರೆ ‘ಮುನಿರತ್ನ ಅಂಡ್ ಕಂಪನಿ’ ಹೆಸರಿಡುತ್ತೇವೆ” ಎಂದು ಲೇವಡಿ ಮಾಡಿ ಸಭಾಂಗಣದಲ್ಲಿ ನಗೆಪಾಟಲಿಗೆ ಕಾರಣರಾದರು.
ಇದನ್ನು ಓದಿ: Mysore Dasara 2025: ಗಜಪಡೆಯ ತೂಕ ಪರೀಕ್ಷೆ, ಭೀಮ ಅತಿ ಭಾರದ ಆನೆ – ಅಭಿಮನ್ಯುವಿನ ತೂಕದಲ್ಲೂ ಅಚ್ಚರಿ ಏರಿಕೆ!
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಮುನಿರತ್ನ ಅವರು, ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಯೋಜನೆ ಕೈಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡುವ ಸಂಸ್ಥೆಗಳಿಗೆ ತಮ್ಮ ಹೆಸರಿಡಲು ಅವಕಾಶ ನೀಡುವುದು ಸರ್ಕಾರದ ನೀತಿ ಎಂದು ತಿಳಿಸಿದರು.
‘ನಿಲ್ದಾಣ ಬೇಕಿರುವುದು ಮುನಿರತ್ನ ಅವರ ವೈಯಕ್ತಿಕ ಲಾಭಕ್ಕೆ’:
“ಬೆಂಗಳೂರಿನಲ್ಲಿ ಕೆಲವು ಸಂಸ್ಥೆಗಳ ಸಿಎಸ್ಆರ್ ನಿಧಿ ಬಳಸಿ ಮೆಟ್ರೋ ನಿಲ್ದಾಣ ನಿರ್ಮಿಸಿದರೆ, ಆ ನಿಲ್ದಾಣಕ್ಕೆ ಸಂಸ್ಥೆಯ ಹೆಸರಿಡಲು ಅವಕಾಶ ನೀಡುತ್ತೇವೆ. ಈ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪ್ರಶಂಸೆ ಮಾಡಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೂ ಇದ್ದರು,” ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಸೆಪ್ಟೆಂಬರ್ 9ಕ್ಕೆ ವಿಚಾರಣೆ ಮುಂದೂಡಿದ 64ನೇ ಸೆಷನ್ಸ್ ಕೋರ್ಟ್
“ಇನ್ಫೋಸಿಸ್ ₹200 ಕೋಟಿ ಕೊಟ್ಟಿದೆ, ಅವರಿಗೆ ನಿಲ್ದಾಣದ ಹೆಸರಿಡಲಾಗಿದೆ. ಡೆಲ್ಟಾ ಕೂಡ ಹಣ ಕೊಟ್ಟಿದೆ. ಎಲ್ಲ ಸರ್ಕಾರಗಳು ಇದನ್ನು ಮಾಡಿಕೊಂಡು ಬಂದಿವೆ. ಪಾಪ, ಮುನಿರತ್ನ ಅವರಿಗೆ ಸೇರಿದ 70-80 ಎಕರೆ ಜಮೀನು ಆ ಭಾಗದಲ್ಲಿದೆ. ಅವರ ಜಮೀನಿನ ಪಕ್ಕದಲ್ಲಿ ಮೆಟ್ರೋ ನಿಲ್ದಾಣ ಬೇಕಾಗಿರುವುದರಿಂದಲೇ ಈ ಪ್ರಶ್ನೆ ಎತ್ತಿದ್ದಾರೆ,” ಎಂದು ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಟೀಕಿಸಿದರು.
‘ಶಿವಕುಮಾರ್ ಮಾತಿಗೆ ಬಿಲ್ಡರ್ಗಳು ಹಣ ಕೊಡುತ್ತಾರೆ’:
ಇದಕ್ಕೆ ಪ್ರತಿಯಾಗಿ ಮುನಿರತ್ನ, “ಬಿಲ್ಡರ್ಗಳು ಕೇವಲ ಡಿ.ಕೆ. ಶಿವಕುಮಾರ್ ಅವರ ಮಾತನ್ನಷ್ಟೇ ಕೇಳುತ್ತಾರೆ. ನೀವು ಎಂಬೆಸಿ ಬಿಲ್ಡರ್ಸ್ಗೆ ಕರೆ ಮಾಡಿ 24 ಗಂಟೆಯೊಳಗೆ ಹಣ ಕಟ್ಟುತ್ತೀರಾ ಇಲ್ಲವಾ ಎಂದು ಕೇಳಿದರೆ ಸಾಕು, ಅವರು ತಕ್ಷಣ ಹಣ ಕಟ್ಟುತ್ತಾರೆ,” ಎಂದು ತಿರುಗೇಟು ನೀಡಿದರು.
‘ಧಮ್ಕಿ ಹಾಕುವುದೇಕೆ?’
ಮುನಿರತ್ನ ಅವರ ಮಾತಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನಾನೇಕೆ ಧಮ್ಕಿ ಹಾಕಲಿ? ಬೇಕಾದರೆ ಎಂಬೆಸಿ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸೋಣ. ಮುನಿರತ್ನ ಹಣ ಕೊಟ್ಟರೆ ‘ಮುನಿರತ್ನ ಅಂಡ್ ಕಂಪನಿ’ ಎಂದು ಹೆಸರಿಡೋಣ,” ಎಂದು ಲೇವಡಿ ಮಾಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿ, “ಎಂಬೆಸಿ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರು ಕೇವಲ ₹1 ಕೋಟಿ ಕೊಟ್ಟಿದ್ದಾರೆ. ಉಳಿದ ₹119 ಕೋಟಿ ನೀಡಲಿ ಎಂದು ಉಪಮುಖ್ಯಮಂತ್ರಿಗಳು ಧಮ್ಕಿ ಹಾಕಲಿ ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ,” ಎಂದರು.
ಇದಕ್ಕೆ ಮತ್ತೆ ತಿರುಗೇಟು ನೀಡಿದ ಶಿವಕುಮಾರ್, “ಈ ಮೆಟ್ರೋ ನಿಲ್ದಾಣದ ಬಗ್ಗೆ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡರು ನನ್ನ ಜೊತೆ ಚರ್ಚಿಸಿ ಪರಿಸ್ಥಿತಿ ವಿವರಿಸಿದ್ದಾರೆ. ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇಷ್ಟೇ ವ್ಯತ್ಯಾಸ,” ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆ ವಿಧಾನಸಭೆಯಲ್ಲಿ ನಗೆಪಾಟಲಿಗೆ ಕಾರಣವಾಯಿತು.
