ತುಮಕೂರು: ಜಿಲ್ಲೆಯಲ್ಲಿ ಯಕ್ಷಗಾನ ತರಬೇತಿ, ಸಂಘಟನೆ ಹಾಗೂ ಪ್ರದರ್ಶನಗಳನ್ನು ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷದೀವಿಗೆ(Yakshadeevige) ಸಂಸ್ಥೆಯು ಭೂತಾನ್ ಅಧ್ಯಯನ ಪ್ರವಾಸಕ್ಕೆ ಆಯ್ಕೆಯಾಗಿದೆ. ಭಾರತ ಸರ್ಕಾರ ಹಾಗೂ ಭೂತಾನ್ ಸರ್ಕಾರ ಸಹಭಾಗಿತ್ವದ ಇಂಡಿಯಾ-ಭೂತಾನ್ ಫೌಂಡೇಶನ್ ಈ ಯೋಜನೆಗೆ ಆರ್ಥಿಕ ಬೆಂಬಲ ನೀಡಿದೆ.
‘ಕರ್ನಾಟಕದ ಯಕ್ಷಗಾನ ಮತ್ತು ಭೂತಾನ್ನ ಮುಖವಾದ ನೃತ್ಯ: ಒಂದು ತೌಲನಿಕ ಸಾಂಸ್ಕೃತಿಕ ಅಧ್ಯಯನ’ ಎಂಬ ಸಂಶೋಧನ ಯೋಜನೆಯು ಇದಾಗಿದ್ದು, ಯಕ್ಷದೀವಿಗೆಯ ಪ್ರತಿನಿಧಿಗಳಾಗಿ ತುದು ಕೂರು ವಿದ್ಯಾನಿಧಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಹಾಗೂ ಯಕ್ಷ ದೇವಿಗೆ ಅಧ್ಯಕ್ಷೆ ಆರತಿ ಪಟ್ರಮೆ, ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ.ವಿ. ಹಾಗೂ ಎಸ್. ಎಸ್.ಪುರಂ ಮಾರುತಿ ವಿದ್ಯಾಕೇಂದ್ರದ ವಿದ್ಯಾರ್ಥಿ ಸಂವೃತ ಎಸ್.ಪಿ. ಭಾಗವಹಿಸಲಿದ್ದಾರೆ.
2026ರ ಜನವರಿ 2ರಿಂದ ಎರಡು ವಾರ ಅಧ್ಯಯನ ಪ್ರವಾಸ ಕೈಗೊಳ್ಳಲಿರುವ ಯುಕ್ತದೀವಿಗೆ ತಂಡವು ಭೂತಾನ್ನ ರಾಜಧಾನಿ ಥಿಂಪು, ಸಾಂಸ್ಕೃತಿಕ
ನಗರಗಳಾದ ಪಾರೊ, ಪುನಾಖಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಕೈಗೊಳ್ಳಲಿದೆ. ಮುಖವಾಡ ನೃತ್ಯದ ಉಗಮ ಸ್ಥಾನಗಳಾದ ಬೌದ್ಧ ವಿಹಾರಗಳನ್ನು ಸಂದರ್ಶಿಸಿ ಕಲೆಯ ಪ್ರಾಚೀನತೆ, ವೈಶಿಷ್ಟ್ಯ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿಶ್ಲೇಷಿಸಲಿದೆ.
ಮುಖವಾಡ ನೃತ್ಯವು ಭೂತಾನ್ನ ಸಾಂಪ್ರದಾಯಿಕ ಕಲೆಯಾಗಿದ್ದು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಬೌದ್ಧ ಗುರು ಹದ ಸಂಭವ ಅವರ ಗೌರವಾರ್ಥ ಆರಂಭವಾದ ಈ ಕಲೆ ಸಮುದಾಯಗಳಲ್ಲಿ ಬೌದ್ಧ ಚಿಂತನೆಗಳನ್ನು ಪ್ರಚುರಪಡಿಸುವ ಉದ್ದೇಶ ಹೊಂದಿದೆ. ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಯಲ್ಲಿ ಮುಖದಾಡ ನೃತ್ಯ ಸ್ಥಾನ ಪಡೆದಿರುವುದು ಗಮನಾರ್ಹ, ಕರ್ನಾಟಕದ ಪ್ರಸಿದ್ಧ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದ ಗುಣಲಕ್ಷಣಗಳೊಂದಿಗೆ ಈ ಕಲೆಯನ್ನು ಹೋಲಿಸಿ ಅಧ್ಯಯನ ಮಾಡುವ ಉದ್ದೇಶವು ಪ್ರಸ್ತುತ ಸಂಶೋಧನ ಯೋಜನೆಯದಾಗಿದೆ.
ಭೂತಾನ್ ಗೃಹಸಚಿವಾಲಯದ ವ್ಯಾಪ್ತಿಯಲ್ಲಿರುವ ಸಂಸ್ಕೃತಿ ಇಲಾಖೆ ಹಾಗೂ ರಾಯಲ್ ಯುನಿವರ್ಸಿಟಿ ಆಫ್ ಭೂತಾನ್ ಭಾಷೆ ಮತ್ತು ಸಂಸ್ಕೃತಿ ಕಾಲೇಜು ಈ ಸಂಶೋಧನ ಪ್ರವಾಸಕ್ಕೆ ಶೈಕ್ಷಣಿಕ ಬೆಂಬಲ ನೀಡಿದೆ. ಯಕ್ಷದೀವಿಗೆ ತಂಡವು ರಾಜಧಾನಿಯಲ್ಲಿರುವ ಸಾಂಪ್ರದಾಯಿಕ ಪ್ರದರ್ಶನ ಕಲೆ ಮತ್ತು ಸಂಗೀತ ಸಂಸ್ಥೆಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಗಳನ್ನು ನೀಡಲಿದೆ. ಯಕ್ಷಗಾನ ಮುಖವರ್ಣಿಕೆ, ವೇಷಭೂಷಣ, ನಾಟ್ಯ, ರಂಗಚಲನೆ, ಇತ್ಯಾದಿಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಲಿದೆ.
ಇದು ಯಕ್ಷದೀವಿಗೆಗೆ ದೊರೆತಿರುವ ಒಂದು ಮಹತ್ವದ ಅವಕಾಶವಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೆ ಹಾಗೂ ವಿಭಿನ್ನ ಶ್ರೀಮಂತ ಕಲೆಗಳ ತೌಲನಿಕ ಅಧ್ಯಯನಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಈ ಅಧ್ಯಯನದ ಆಧಾರದಲ್ಲಿ ಹುಸ್ತಕ ಹಾಗೂ ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಲಾಗುವುದು ಎಂದು ಯಕ್ಷದೀವಿಗೆಯ ಅಧ್ಯಕ್ಷೆ ಡಾ. ಆರತಿ ಪಟ್ರಮೆ ತಿಳಿಸಿದ್ದಾರೆ.
