kodi shree
ಧಾರವಾಡ: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ನವೆಂಬರ್ನಲ್ಲಿ ದೊಡ್ಡ ರಾಜಕೀಯ ಬದಲಾವಣೆಯಾಗಲಿದೆ ಎಂಬ ಆಂತರಿಕ ಮಾತುಗಳ ನಡುವೆಯೇ, ಭವಿಷ್ಯ ನುಡಿಯುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು (Kodi Shree Bhavishya) ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು. “ಸಂಕ್ರಾಂತಿವರೆಗೆ ನಾನು ಏನೂ ಹೇಳುವುದಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಭಯವಿಲ್ಲ. ಉಳಿದ ವಿಚಾರಗಳನ್ನು ಸಂಕ್ರಾಂತಿ ಆದ ಮೇಲೆ ನೋಡಿ ಹೇಳಬೇಕು” ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಆ ಮೂಲಕ ಸದ್ಯಕ್ಕೆ ಸಿಎಂ ಬದಲಾವಣೆಯ ವದಂತಿಗಳಿಗೆ ತೆರೆ ಎಳೆದಿದ್ದಾರೆ.(Kodi Shree Bhavishya)
ಪ್ರಕೃತಿ ಮತ್ತು ದಸರಾ ಮಹತ್ವ
ಇದೇ ವೇಳೆ, ದೇಶದಲ್ಲಿ ನಡೆಯುತ್ತಿರುವ ಅನಿರೀಕ್ಷಿತ ಹವಾಮಾನ ಬದಲಾವಣೆಗಳ ಕುರಿತು ಮಾತನಾಡಿದ ಶ್ರೀಗಳು, “ಬಯಲು ಸೀಮೆಯಲ್ಲಿ ಮಲೆನಾಡು ಮಳೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದೆ. ಈಗ ಮಲೆನಾಡು ಸಂಪೂರ್ಣ ಬಯಲುಸೀಮೆ ಆಗಿದೆ, ಬಯಲುಸೀಮೆ ಮಲೆನಾಡು ಆಗಿದೆ” ಎಂದು ವಿವರಿಸಿದರು. ಇದು ಪ್ರಕೃತಿಯ ಸಮತೋಲನವು ಕೈತಪ್ಪುತ್ತಿರುವುದರ ಸ್ಪಷ್ಟ ಸಂಕೇತ ಎಂದು ತಿಳಿಸಿದರು.
ಇನ್ನು, ನಾಡಹಬ್ಬ ದಸರಾದ ನಿಜವಾದ ಸಂದೇಶವನ್ನು ವಿವರಿಸಿದ ಅವರು, ದಸರಾದ ನಿಜವಾದ ಅರ್ಥವೇ ದುಷ್ಟ ಶಕ್ತಿಗಳನ್ನು ಮನಸ್ಸಿನಿಂದ ದೂರವಿಡುವುದು. “ಮನುಷ್ಯನು ತನ್ನಲ್ಲಿನ ಕೋಪ, ತಾಪ, ಆಸೆಗಳನ್ನು ಗೆಲ್ಲಬೇಕು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಈ ದೃಷ್ಟಿಯಿಂದಲೇ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತವಾಗಿದೆ” ಎಂದು ಹೇಳಿ ಜನರಿಗೆ ಹಬ್ಬದ ಶುಭಾಶಯ ತಿಳಿಸಿದರು.
