ಬೆಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿ ಆರ್ಎಸ್ಎಸ್(RSS) ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದ ಬೆನ್ನಲ್ಲೇ, ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರು ತಮಗೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಮತ್ತು ಕುಟುಂಬದ ವಿರುದ್ಧ ಬೆದರಿಕೆ ಕರೆಗಳು, ವೈಯಕ್ತಿಕ ನಿಂದನೆಗಳು ಬರುತ್ತಿದ್ದರೂ, ‘ನಾನು ಜಗ್ಗುವುದಿಲ್ಲ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ.
“ನಾನು ಸರ್ಕಾರಿ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ RSS ಚಟುವಟಿಕೆಗಳನ್ನು ಪ್ರಶ್ನಿಸಲು ಧೈರ್ಯ ಮಾಡಿದ್ದೇನೆ. ಇದಕ್ಕಾಗಿ ಈಗ ನನ್ನ ಫೋನ್ ರಿಂಗಣಿಸುವುದು ನಿಂತಿಲ್ಲ. ಅತ್ಯಂತ ಕೆಟ್ಟ ನಿಂದನೆಗಳು ಮತ್ತು ಬೆದರಿಕೆಗಳಿಂದ ನನ್ನ ದಿನಚರಿ ತುಂಬಿಹೋಗಿದೆ,” ಎಂದು ಖರ್ಗೆ(Priyank Kharge) ನೋವು ತೋಡಿಕೊಂಡಿದ್ದಾರೆ.
ಗಾಂಧಿ-ಅಂಬೇಡ್ಕರ್ ದಾರಿಯಲ್ಲಿ ನನ್ನ ಹೋರಾಟ:
ಆದರೆ, ಈ ಬೆದರಿಕೆಗಳಿಗೆಲ್ಲಾ ತಾನು ಹೆದರುವುದಿಲ್ಲ ಎಂದು ಸಚಿವ ಖರ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. “ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಡದವರು, ನನ್ನನ್ನೇಕೆ ಬಿಡುತ್ತಾರೆ? ಈ ಬೆದರಿಕೆಗಳು ನನ್ನನ್ನು ಮೌನಗೊಳಿಸುತ್ತವೆ ಎಂದು ಅವರು (ಬೆದರಿಕೆ ಹಾಕುವವರು) ಭಾವಿಸಿದ್ದರೆ, ಅದು ಸಂಪೂರ್ಣ ತಪ್ಪು ಕಲ್ಪನೆ. ನೆನಪಿರಲಿ, ಇದು ಕೇವಲ ಆರಂಭವಷ್ಟೇ!” ಎಂದು ಪ್ರಿಯಾಂಕ್ ಖರ್ಗೆ(Priyank Kharge) ಸವಾಲೆಸೆದಿದ್ದಾರೆ.
ಖರ್ಗೆಯವರು(Priyank Kharge) ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಸಮಾನತೆ ಮತ್ತು ಕರುಣೆಯ ತತ್ತ್ವಗಳ ಮೇಲೆ ಸ್ಥಾಪಿತವಾದ ಸಮಾಜವನ್ನು ನಿರ್ಮಿಸಲು ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ. “ಈ ದೇಶವನ್ನು ಅತ್ಯಂತ ಅಪಾಯಕಾರಿ ವೈರಸ್ಗಳಿಂದ ಶುದ್ದೀಕರಿಸುವ ತುರ್ತು ಇದೆ,” ಎಂದು ಹೇಳುವ ಮೂಲಕ, ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಸೂಚಿಸಿದ್ದಾರೆ.
ಪ್ರಿಯಾಂಕ್ ಖರ್ಗೆ(Priyank Kharge) ಅವರ ಈ ಧೈರ್ಯದ ನಿಲುವು ಮತ್ತು ಬೆದರಿಕೆಗಳ ಬಹಿರಂಗವು ರಾಜ್ಯ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿದೆ.
