ಬೆಂಗಳೂರು: ನಾವೆಲ್ಲಾ ‘ಸಿಲಿಕಾನ್ ಸಿಟಿ'(cilicon City) ಎಂದು ಹೆಮ್ಮೆಯಿಂದ ಕರೆಯುವ ನಮ್ಮ ಬೆಂಗಳೂರು, ಈಗ ಮತ್ತೊಂದು ಕಾರಣಕ್ಕಾಗಿ ದೇಶದ ಗಮನ ಸೆಳೆದಿದೆ. ಇದು ಅತ್ಯಂತ ದುಃಖಕರ ಸಂಗತಿಯಾಗಿದೆ. ಅಪಘಾತ ಮತ್ತು ಆತ್ಮಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ನಮ್ಮ ನಗರ ರಾಷ್ಟ್ರದಲ್ಲಿಯೇ ಮೂರನೇ ಸ್ಥಾನಕ್ಕೆ ಏರಿದೆ.
ಹೌದು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2023ರ ವರದಿ(NCRB Report 2023) ಪ್ರಕಟವಾಗಿದ್ದು, ಈ ಅಂಕಿ-ಅಂಶಗಳು ನಿಜಕ್ಕೂ ಆತಂಕಕಾರಿಯಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಬರೋಬ್ಬರಿ 4,414 ಮಂದಿ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈ ಮತ್ತು ಪುಣೆಯ ನಂತರ ಬೆಂಗಳೂರು ಸ್ಥಾನ ಪಡೆದಿರುವುದು, ನಮ್ಮ ನಗರದ ಜನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ.
ರಸ್ತೆ ಅಪಘಾತ, ಕರೆಂಟ್ ಶಾಕ್
ವರ್ಷ ಇಡೀ ದೇಶದಲ್ಲಿ 65,897 ಆಕಸ್ಮಿಕ ಸಾವುಗಳು ಸಂಭವಿಸಿವೆ. ಅದರಲ್ಲಿ ಮುಂಬೈ (8,974) ಮತ್ತು ಪುಣೆ (5,054) ನಂತರ ಬೆಂಗಳೂರು ಮೂರನೇ ಸ್ಥಾನದಲ್ಲಿದ (4,414 ಸಾವುಗಳು). ಈ ಸಾವುಗಳಲ್ಲಿ ರಸ್ತೆ ಅಪಘಾತ, ವಿದ್ಯುತ್ ಶಾಕ್ನಂತಹ ಕಾರಣಗಳು ಸೇರಿವೆ.ಮುಖ್ಯವಾಗಿ, ರಸ್ತೆ ಅಪಘಾತದಿಂದಾಗಿ ಸಾವಿನ ಸಂಖ್ಯೆಯು ಹೆಚ್ಚು ಕಳವಳಕಾರಿ.
2023ರಲ್ಲಿ 4,980 ಅಪಘಾತಗಳು ವರದಿಯಾಗಿದ್ದು, ಇದರಲ್ಲಿ 915 ಅಮಾಯಕ ಜೀವಗಳು ಬಲಿಯಾಗಿವೆ. ಈ ಸಂಖ್ಯೆಯು -ದೆಹಲಿ (1,457) ಮತ್ತು ಜೈಪುರ (1,017) ನಂತರ ಮೂರನೇ ಸ್ಥಾನದಲ್ಲಿದೆ. ಅತ್ಯಂತ ಬೇಸರದ ಸಂಗತಿಯೆಂದರೆ, ಈ ಎಲ್ಲಾ ಆಕಸ್ಮಿಕ ಸಾವುಗಳಲ್ಲಿ ಶೇಕಡಾ 97.3ರಷ್ಟು ಸಾವುಗಳಿಗೆ ರಸ್ತೆ ಅಪಘಾತಗಳೇ ಕಾರಣವಾಗಿವೆ. ನಮ್ಮ ರಸ್ತೆಗಳು ಎಷ್ಟೊಂದು ಅಪಾಯಕಾರಿಯಾಗಿವೆ ಎಂಬುದಕ್ಕೆ ಇದೊಂದು ಕಣ್ಣು ತೆರಸುವ ದಾಖಲೆಯಾಗಿದೆ.(NCRB Report 2023)
ಆತ್ಮಹತ್ಯೆ ಪ್ರಕರಣ ಹೆಚ್ಚಳ
ಆಕಸ್ಮಿಕ ಸಾವುಗಳಷ್ಟೇ ಅಲ್ಲ, ಬೆಂಗಳೂರಿನಲ್ಲಿ ಆತ್ಮಹತ್ಯೆಗಳ ಸಂಖ್ಯೆಯೂ ಗಗನಕ್ಕೇರಿದೆ. 2022ರಲ್ಲಿ 2,313 ಆಗಿದ್ದ ಆತ್ಮಹತ್ಯೆ ಪ್ರಕರಣಗಳು, 2023ರ ಹೊತ್ತಿಗೆ ಶೇ. 2.5ರಷ್ಟು ಏರಿಕೆ ಕಂಡು 2,370ಕ್ಕೆ ತಲುಪಿವೆ. ಈ ಕರುಣಾಜನಕ ಅಂಕಿ-ಅಂಶದೊಂದಿಗೆ, ಆತ್ಮಹತ್ಯೆಯಿಂದ ಸಾವಿಗೀಡಾದವರ ಸಂಖ್ಯೆಯಲ್ಲಿ ಬೆಂಗಳೂರು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ದೆಹಲಿ (3,131) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ (1,529) ಮತ್ತು ಮುಂಬೈ (1.415) ನಂತರದ ಸ್ಥಾನಗಳಲ್ಲಿವೆ. ಈ ನಾಲ್ಕು ಮಹಾನಗರಗಳಲ್ಲಿ ನಡೆದಿರುವ ಒಟ್ಟು ಸಾವುಗಳ ಸಂಖ್ಯೆ, ದೇಶದ ಉಳಿದ 53 ನಗರಗಳ ಒಟ್ಟು ಸಂಖ್ಯೆಗಿಂತ ಹೆಚ್ಚಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಒಟ್ಟಾರೆ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 32ರಷ್ಟು ಈ ನಾಲ್ಕು ನಗರಗಳಲ್ಲೇ ಸಂಭವಿಸಿವೆ.(NCRB Report 2023)ನಗರ ಜೀವನದ ಒತ್ತಡ, ಏಕಾಂತತೆ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು ನಮ್ಮ ನಡುವೆಯೇ ಮೌನವಾಗಿ ಎಷ್ಟು ದೊಡ್ಡ ದುರಂತವನ್ನು ಸೃಷ್ಟಿಸುತ್ತಿವೆ ಎಂಬುದಕ್ಕೆ ಈ ವರದಿ ಸಾಕ್ಷಿ. ಈ ಅಂಕಿ-ಅಂಶಗಳು ಕೇವಲ ವರದಿಗಳಲ್ಲ ಕಳೆದುಹೋದ ಅಮೂಲ್ಯ ಜೀವಗಳು, ಮತ್ತು ಅವುಗಳ ಒಡೆದ ಕನಸುಗಳು ಎಂಬುದನ್ನು ಮರೆಯಬಾರದು.
