ತುಮಕೂರು: ನಗರದಲ್ಲಿ ನಾಳೆ ರಾಜ್ಯಮಟ್ಟದ ವಿಶೇಷ ಮಹಿಳಾ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ(karnataka Yakshagana Accademy) ಬೆಂಗಳೂರು ಮತ್ತು ಯಕ್ಷದೀವಿಗೆ ತುಮಕೂರು ಸಹಯೋಗದಲ್ಲಿ ಕೆ.ಆರ್. ಬಡಾವಣೆಯ ಶ್ರೀಕೃಷ್ಣ ಮಂದಿರದಲ್ಲಿ ಒಂದು ದಿನದ ‘ಮಹಿಳಾ ಯಕ್ಷಸಂಭ್ರಮ'(Yaksha Sambrama) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಭ್ರಮದ ವಿಶೇಷವೆಂದರೆ, ದಿನವಿಡೀ ನಡೆಯುವ ಎಲ್ಲಾ ಪ್ರದರ್ಶನಗಳಲ್ಲಿ ಮಹಿಳಾ ಯಕ್ಷಗಾನ ಕಲಾವಿದರೇ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭ ಮತ್ತು ಗೋಷ್ಠಿ
ದಿವಂಗತ ಲೀಲಾವತಿ ಬೈಪಾಡಿತ್ತಾಯ ವೇದಿಕೆಯಲ್ಲಿ ನಾಳೆ ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ವಹಿಸಲಿದ್ದು, ಪ್ರಾಚೀನ ಕಾವ್ಯಗಳ ಪ್ರವಚನಕಾರರಾದ ಟಿ. ಮುರಳಿಕೃಷ್ಣಪ್ಪ ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ: Cyber Crime: ಗೂಗಲ್ ಕ್ರೋಮ್, ಫೈರ್ಫಾಕ್ಸ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ!; ಈ ಕೂಡಲೇ ಈ ಕೆಲಸ ಮಾಡಿ
ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ನಮ್ರತ ಎನ್, ಸದಸ್ಯ ಎ. ಆರ್. ಪುಟ್ಟಸ್ವಾಮಿ ಅರಳಗುಪ್ಪೆ, ಹಿರಿಯ ಸಾಹಿತಿ ಡಾ. ಕಮಲಾ ನರಸಿಂಹ, ಯಕ್ಷದೀವಿಗೆ ಅಧ್ಯಕ್ಷೆ ಹಾಗೂ ಅಕಾಡೆಮಿ ಮಾಜಿ ಸದಸ್ಯೆ ಡಾ.ಆರತಿ ಪಟ್ರಮೆ ಭಾಗವಹಿಸಲಿದ್ದಾರೆ.
ಬೆಳಗ್ಗೆ 10:30ರಿಂದ ‘ಯಕ್ಷಗಾನ ಮತ್ತು ಮಹಿಳೆ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಯಕ್ಷಗಾನ ಕಲಾವಿದೆಯರಾದ ಶಾಲಿನಿ ಹೆಬ್ಬಾರ್, ಶಿಕ್ಷಕಿ ಸೌಮ್ಯಾ ಪ್ರದೀಪ್ ಹೆಬ್ಬಾರ್ ಹಾಗೂ ಮೂಡಬಿದ್ರೆಯ ಡಾ. ದಿವ್ಯಶ್ರೀ ಡಂಬಳ ಅವರು ವಿವಿಧ ವಿಷಯಗಳ ಕುರಿತು ವಿಚಾರಮಂಡನೆ ಮಾಡಲಿದ್ದಾರೆ. ಸಮನ್ವಯಕಾರರಾಗಿ ಡಾ. ಆರತಿ ಪಟ್ರಮೆ ಭಾಗವಹಿಸಲಿದ್ದಾರೆ.
ದಿನವಿಡೀ ಯಕ್ಷಗಾನದ ಸುಧೆ!
ಸಂಭ್ರಮದ ಭಾಗವಾಗಿ ದಿನವಿಡೀ ಮೂರು ಪ್ರಮುಖ ಪ್ರದರ್ಶನಗಳು ನಡೆಯಲಿವೆ:
- ತಾಳಮದ್ದಳೆ: ‘ಕರ್ಣಾರ್ಜುನ ಕಾಳಗ’ (ಬೆಳಗ್ಗೆ 11:30 ರಿಂದ) ಈ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಶಾಲಿನಿ ಹೆಬ್ಬಾರ್, ವರುಣ್ ಹೆಬ್ಬಾರ್, ಪವನ್ ಕಲ್ಲೂರಾಯ ಭಾಗವಹಿಸಿದರೆ, ಮುಮ್ಮೇಳದಲ್ಲಿ ಮಾಲತಿ ಮುರಳಿ, ವನಿತಾ ಶ್ಯಾಮಪ್ರಸಾದ್, ಪ್ರೇಮಾ ಅನಂತ ಹೆಗಡೆ, ಹೇಮಲತಾ ಎಂ.ಎಸ್. ಮತ್ತು ನಿರ್ಮಲಾ ನಾರಾಯಣ ಗಾಂಲ್ಕರ್ ಇರಲಿದ್ದಾರೆ. ಡಾ. ಕಮಲಾ ನರಸಿಂಹ ಅವರು ಪ್ರತಿಕ್ರಿಯೆ ನೀಡಲಿದ್ದಾರೆ.
- ಬಡಗುತಿಟ್ಟು ಯಕ್ಷಗಾನ: ‘ಪಂಚವಟಿ’ (ಮಧ್ಯಾಹ್ನ 2:30 ರಿಂದ) ಈ ಪ್ರದರ್ಶನದಲ್ಲಿ ಚಿತ್ತಲಾ ಕೆ. ತುಂಗ, ಚಿನ್ಮಯ್ ಅಂಬಾರಗೋಡು ಹಾಗೂ ಮನೋಜ್ ಆಚಾರ್ಯ ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಪೂಜಾ ಆಚಾರ್ಯ, ರಮ್ಯಾ ಸಹಸ್ರಬುದ್ಧ, ಪೂನಂ ಗೋಖಲೆ, ಶೈಲಜಾ ಜೋಶಿ, ಭುವನಾ ಡೋಂಗ್ರೆ, ನಯನಾ ಭಿಡೆ, ಶುಭಾ ಗೋರೆ, ಸೌಮ್ಯಾ ಆಠವಲೆ ಪ್ರದರ್ಶನ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪ್ರೊ. ಟಿ. ಆರ್. ಲೀಲಾವತಿ ಪ್ರತಿಕ್ರಿಯೆ ನೀಡಲಿದ್ದಾರೆ.
- ತೆಂಕುತಿಟ್ಟು ಯಕ್ಷಗಾನ: ‘ತರಣ ಸೇನ ಕಾಳಗ’ (ಸಂಜೆ 4:30 ರಿಂದ) ಸಂಜೆ ನಡೆಯುವ ಈ ಪ್ರದರ್ಶನಕ್ಕೆ ದೀಪಕ ತುಳುವುಳೆ, ಪೃಥ್ವಿ, ಬಡೆಕ್ಕಿಲ, ಸಂವೃತ ಶರ್ಮಾ ಮತ್ತು ಪ್ರದೀಪ್ ಹಿಮ್ಮೇಳದ ಜವಾಬ್ದಾರಿ ವಹಿಸಲಿದ್ದಾರೆ. ಮುಮ್ಮೇಳದಲ್ಲಿ ಲಹರಿ ಟಿ.ಜೆ., ಜನ್ಯಾ ಟಿ.ಜಿ., ಮನಸ್ಸಿ ಭಟ್, ಅದಿತಿಕೃಷ್ಣ, ಆರತಿ ಪಟ್ರಮ, ಖುಷಿ ಶರ್ಮಾ, ಇಂಚರಾ ಎಸ್. ಹಾಗೂ ವಾರಧಿ ಸೇರಿದಂತೆ ಹಲವು ಕಲಾವಿದರು ಭಾಗವಹಿಸಲಿದ್ದಾರೆ. ಹಿರಿಯ ಕಾದಂಬರಿಕಾರ್ತಿ ಸುಮಾ ಬೆಳಗೆರೆ ಪ್ರತಿಕ್ರಿಯೆ ನೀಡಲಿದ್ದಾರೆ.
ಯಕ್ಷಗಾನ ಪ್ರಿಯರು ಹಾಗೂ ಕಲಾಸಕ್ತರು ಈ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.
