ಹಾಸನ: ಪತಿ ಮತ್ತು ಅತ್ತೆ ನೀಡುತ್ತಿದ್ದ ನಿರಂತರ ಕಿರುಕುಳ ಹಾಗೂ ಮಾನಸಿಕ ಹಿಂಸೆಯನ್ನು ಸಹಿಸಲಾಗದ ಮಹಿಳೆಯೊಬ್ಬರು ತನ್ನ ಕಂದಮ್ಮನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಟ್ಟ ಸೋಗೆ ಗ್ರಾಮದಲ್ಲಿ ನಡೆದಿದೆ.(Hassan Suicide Case) ಸಾಯುವುದಕ್ಕೂ ಮುನ್ನ ಮಹಿಳೆ ಡೆತ್ ನೋಟ್ ಬರೆದಿಟ್ಟು ತಮ್ಮ ಮಗಳೊಂದಿಗೆ ಭಾವುಕ ವಿಡಿಯೋ ಮಾಡಿ ಕಾವೇರಿ ನದಿಗೆ ಹಾರಿದ್ದಾರೆ. ಅದರೆ, ಈ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬಸ್ಥರು ತೀವು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಮದುವೆಯಾದಾಗಿನಿಂದಲೂ ನರಕ!
ಮೃತರನ್ನು ಸಾಲಿಗ್ರಾಮ ಮೂಲದ ಮಹಾದೇವಿ (29) ಎಂದು ಗುರುತಿಸಲಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ಸೀಬಳ್ಳಿ ಗ್ರಾಮದ ಕುಮಾರ್ ಅವರೊಂದಿಗೆ ಇವರ ವಿವಾಹವಾಗಿತ್ತು. ಆದರೆ, ಮದುವೆಯಾದ ದಿನದಿಂದಲೇ ಪತಿ ಕುಮಾರ್, ಮಹಾದೇವಿಯವರ ಮೇಲೆ ಅನುಮಾನಪಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಮಾನಸಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಪತಿಯ ಹಿಂಸೆಯಿಂದ ಬೇಸತ್ತು ಹೋಗಿದ್ದ ಮಹಾದೇವಿ, 15 ದಿನಗಳ ಹಿಂದೆಯೇ ತನ್ನ ತವರು ಮನೆ ಸೇರಿದ್ದರು. ಅಲ್ಲಿಯೂ ಸುಮ್ಮನಾಗದ ಪತಿ ಕುಮಾರ್, ಫೋನ್ ಮತ್ತು ಮೆಸೇಜ್ಗಳ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ಮುಂದುವರೆಸಿದ್ದ ಎಂದು ತಿಳಿದುಬಂದಿದೆ.(Hassan Suicide Case)
ವಿಡಿಯೋದಲ್ಲಿ ತನ್ನ ನೋವು ತೋಡಿಕೊಂಡಿದ್ದ ಮಹಿಳೆ:
ನವೆಂಬರ್ 14 ರಂದು ಪತಿಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಹಾದೇವಿ, ನಂತರ ತನ್ನ ನೋವನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಕಾವೇರಿ ನದಿಗೆ ಹಾರುವ ಮೊದಲು ಸೆಲ್ಸಿ ವಿಡಿಯೋ ಮಾಡಿದ ಮಹಾದೇವಿ “ನನ್ನ ಪತಿ ಮತ್ತು ಅತ್ತೆಯೇ ನನ್ನ ಸಾವಿಗೆ ನೇರ ಕಾರಣ. ಇಷ್ಟೇ ಅಲ್ಲದೆ, ನನ್ನ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ್ದಾನೆ. ಹೀಗಿರುವಾಗ ನಾನು ಏಕೆ ಬದುಕಿರಬೇಕು?” ಎಂದು ಅಳಲು ತೋಡಿಕೊಂಡಿದ್ದಾರೆ. ದುರದೃಷ್ಟವಶಾತ್, ಬೆಟ್ಟಸೋಗೆ ಬಳಿಯ ನದಿಯಲ್ಲಿ ಮಹಾದೇವಿಯವರ ಮೃತದೇಹ ಪತ್ತೆಯಾಗಿದ್ದು, ಅವರ ಪುಟ್ಟ ಮಗುವಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪೊಲೀಸರ ನಿರ್ಲಕ್ಷ್ಯವೇ ಅಕ್ಕನ ಸಾವಿಗೆ ಕಾರಣ: ಸಹೋದರನ ಆಕ್ರೋಶ
ಸಾವಿಗೂ ಮುನ್ನ ಮಹಾದೇವಿ ತನ್ನ ಕುಟುಂಬಸ್ಥರಿಗೆ ನೀಡಿದ ಹೇಳಿಕೆಯಲ್ಲಿ ಒಂದು ಗಂಭೀರ ಆರೋಪವಿದೆ. ಪತಿ-ಅತ್ತೆಯ ಕಿರುಕುಳ ತಾಳಲಾರದೆ ದೂರು ನೀಡಲು ಹೋದಾಗ, ಕೊಣನೂರು ಪೊಲೀಸರು ಸರಿಯಾಗಿ ಸ್ಪಂದಿಸದೇ ಹೆದರಿಸಿ ವಾಪಸ್ ಕಳುಹಿಸಿದ್ದರು ಎಂದು ಮಹಾದೇವಿ ತಿಳಿಸಿದ್ದರು ಎನ್ನಲಾಗಿದೆ.
“ಪೊಲೀಸರು ಅಂದು ಸರಿಯಾಗಿ ದೂರು ಸ್ವೀಕರಿಸಿದ್ದರೆ, ನನ್ನ ಅಕ್ಕ ಇಂದು ಬದುಕಿರುತ್ತಿದ್ದಳು. ಅವರ ನಿರ್ಲಕ್ಷ್ಯವೇ ನಮ್ಮ ಅಕ್ಕನ ಸಾವಿಗೆ ಕಾರಣ,” ಎಂದು ಮೃತರ ಸಹೋದರರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.(Hassan Suicide Case)
