
Bombay High Court marriage cruelty verdict: ಮುಂಬೈ: ವೈವಾಹಿಕ ಸಂಬಂಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇತ್ತೀಚೆಗೆ ಕುತೂಹಲಕಾರಿ ತೀರ್ಪುಗಳು ಬರುತ್ತಿವೆ. ಇದೀಗ ಬಾಂಬೆ ಹೈಕೋರ್ಟ್ ವೈವಾಹಿಕ ಸಂಬಂಧದ ವಿಚಾರದಲ್ಲಿ ಮತ್ತೊಂದು ಮಹತ್ವದ ತೀರ್ಪು ನೀಡಿದ್ದು, ಪತ್ನಿ ತನ್ನ ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ವಜಾಗೊಳಿಸಿದೆ. ಈ ಸಂದರ್ಭದಲ್ಲಿ, “ಪತ್ನಿಯ ಅಡುಗೆ ಚೆನ್ನಾಗಿಲ್ಲ” ಅಥವಾ “ಸರಿಯಾದ ಬಟ್ಟೆ ಧರಿಸಿಲ್ಲ” ಎಂದು ಹೇಳುವುದು ಕಿರುಕು-ಳದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Dharmasthala Case Update: ತಪ್ಪು ಮಾಹಿತಿ ಹಬ್ಬಿಸಿದ್ದ ಮಾಧ್ಯಮಗಳಿಗೆ SIT ಸ್ಪಷ್ಟನೆ
ಪ್ರಕರಣದ ಹಿನ್ನೆಲೆ:
2022ರ ಮಾರ್ಚ್ ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ, ಮದುವೆಯಾದ ಕೇವಲ ಒಂದು ವರ್ಷದಲ್ಲೇ ಪತ್ನಿ ಪತಿಯಿಂದ ದೂರವಾಗಿ, ಪತಿ, ಅತ್ತೆ-ಮಾವ ಮತ್ತು ಪತಿಯ ಸಂಬಂಧಿಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಅಂತಿಮವಾಗಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ, ಮಹಿಳೆ ತಾನು ಮದುವೆಯಾದ ತಿಂಗಳಿನಿಂದಲೇ ಅತ್ತೆ ಮನೆಯಲ್ಲಿ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದರು. “ನನ್ನ ಪತಿ ಅಡುಗೆ ಸರಿಯಾಗಿಲ್ಲ, ಬಟ್ಟೆ ಧರಿಸುವ ರೀತಿ ಸರಿ ಇಲ್ಲ ಎಂದು ಚುಚ್ಚು ಮಾತುಗಳಿಂದ ನಿಂದಿಸುತ್ತಿದ್ದರು. ಅಷ್ಟೇ ಅಲ್ಲದೆ, ಪತಿಗೆ ಇರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಮದುವೆಗೂ ಮುನ್ನ ಮುಚ್ಚಿಟ್ಟಿದ್ದರು. ಮನೆ ಖರೀದಿಸಲು 15 ಲಕ್ಷ ರೂಪಾಯಿ ತರುವಂತೆ ಆತನ ಕುಟುಂಬದವರು ಮತ್ತು ಸಂಬಂಧಿಕರು ಹಿಂಸಿಸುತ್ತಿದ್ದರು,” ಎಂದು ಅವರು ನ್ಯಾಯಾಲಯದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು.
ಹೈಕೋರ್ಟ್ ಹೇಳಿದ್ದೇನು?
ಈ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ, ಶುಕ್ರವಾರ ಈ ಮಹತ್ವದ ತೀರ್ಪು ನೀಡಿದೆ. ಪತ್ನಿ ತನ್ನ ಮೇಲಿನ ಕಿರುಕುಳವನ್ನು ಯಾವುದೇ ರೀತಿಯಲ್ಲಿ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಪತ್ನಿ ಸರಿಯಾಗಿ ಬಟ್ಟೆ ಧರಿಸುವುದಿಲ್ಲ ಅಥವಾ ಅಡುಗೆ ಚೆನ್ನಾಗಿ ಮಾಡುವುದಿಲ್ಲ ಎಂದು ಪತಿ ನಿಂದಿಸುತ್ತಾರೆ ಎಂಬಂತಹ ದೂರುಗಳು ಸಾಮಾನ್ಯ. ಆದರೆ, ಇಂತಹ ಕ್ಷುಲ್ಲಕ ವಿಷಯಗಳನ್ನು ನಾವು ಕ್ರೌರ್ಯ ಅಥವಾ ಗಂಭೀರ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ,” ಎಂದು ನ್ಯಾಯಮೂರ್ತಿ ವಿಭಾ ಕಂಕಣವಾಡಿ ಮತ್ತು ನ್ಯಾಯಮೂರ್ತಿ ಸಂಜಯ್ ಎ. ದೇಶಮುಖ್ ಅವರಿದ್ದ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: How to Identify Fresh Fish: ಮೀನು ಖರೀದಿಸುವಾಗ ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ?, ಈ ಟಿಪ್ಗಳನ್ನು ಫಾಲೋ ಮಾಡಿ
ಆಧಾರರಹಿತ ಆರೋಪಗಳು:
ಅರ್ಜಿದಾರೆಗೆ ಇದು ಎರಡನೇ ಮದುವೆಯಾಗಿತ್ತು. 2013ರಲ್ಲಿ ಮೊದಲ ವಿವಾಹದಿಂದ ವಿಚ್ಛೇದನ ಪಡೆದಿದ್ದ ಅವರು, 2022ರಲ್ಲಿ ಮತ್ತೊಬ್ಬರನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ತಿಂಗಳಲ್ಲೇ ಕಿರುಕುಳ ಎದುರಿಸಿದ್ದಾಗಿ ಅವರು ಹೇಳಿದ್ದರು. ಆದರೆ, ಅವರು ಮಾಡಿದ ಆರೋಪಗಳು “ಟ್ರಿಫ್ಲಿಂಗ್” (ಕ್ಷುಲ್ಲಕ) ಸ್ವರೂಪದ್ದಾಗಿದ್ದವು. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಜೊತೆಗೆ, ಅವರ ಆರೋಪಗಳಲ್ಲಿ ಅತಿಶಯೋಕ್ತಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
“ಮದುವೆಗೂ ಮುನ್ನ ಪತಿಯ ಆರೋಗ್ಯದ ಬಗ್ಗೆ ತಿಳಿಸಿರಲಿಲ್ಲ ಎಂದು ಪತ್ನಿ ಹೇಳಿದ್ದಾರೆ. ಆದರೆ, ಇಬ್ಬರ ನಡುವಿನ ವಾಟ್ಸಾಪ್ ಚಾಟ್ ದಾಖಲೆಗಳು ಸತ್ಯವನ್ನು ಬಹಿರಂಗಪಡಿಸಿವೆ. ಅದೇ ರೀತಿ, ಮನೆ ಖರೀದಿಗೆ ಹಣಕ್ಕಾಗಿ ಪೀಡಿಸಿದ್ದಾರೆ ಎಂಬ ಆರೋಪ ಸುಳ್ಳು, ಏಕೆಂದರೆ ಪತಿಗೆ ಈಗಾಗಲೇ ಸ್ವಂತ ಮನೆಯಿತ್ತು. ಹೀಗಿರುವಾಗ ಮತ್ತೊಂದು ಮನೆಗೆ ಹಣ ಕೇಳುವ ಅವಶ್ಯಕತೆ ಏನಿತ್ತು?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
“ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾದಾಗ ‘ಅಡುಗೆ, ಬಟ್ಟೆ ಸರಿಯಿಲ್ಲ’ ಎಂಬಂತಹ ಅತಿಶಯೋಕ್ತಿಯುಕ್ತ ಆರೋಪಗಳು ಸೇರಿಕೊಳ್ಳುತ್ತವೆ. ಇಂತಹ ಸಂದರ್ಭಗಳಲ್ಲಿ ದೂರು ದಾಖಲಿಸುವುದು ಎಂದರೆ, ಕಾನೂನನ್ನು ದುರುಪಯೋಗಪಡಿಸಿಕೊಂಡು ಪತಿ ಮತ್ತು ಆತನ ಕುಟುಂಬವನ್ನು ಹಿಂಸಿಸಿದಂತೆ ಆಗುತ್ತದೆ,” ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಪತಿಯ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
