ಬೆಂಗಳೂರು: ಕೃಷಿ ವಿಶ್ವವಿದ್ಯಾನಿಲಯದಲ್ಲಿ (Bengaluru GKVK) ವಿದ್ಯಾಭ್ಯಾಸ ಮಾಡಿ, ಅಲ್ಲಿಂದ ಹೊರಬರುವ ಪದವಿದರ ಯುವಕರು ಬೆಂಗಳೂರು ಕೃಷಿ ವಿವಿಯ ರಾಯಭಾರಿಗಳು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಹೇಳಿದರು.
ಹೆಬ್ಬಾಳದ ಜಿಕೆವಿಕೆ(Bengaluru GKVK) ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಗುರುವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 60ನೇ ಸಂಸ್ಥಾಪನಾ ದಿನಾಚರಣೆ’ ಹಾಗೂ ಜಲಾನಯನ ನಿರ್ವಹಣೆಯ ಉತ್ಕೃಷ್ಠ ಕೇಂದ್ರದ ನವೀಕರಿಸಿದ ಕಟ್ಟಡ’ ಮತ್ತು ‘ಸೂಕ್ಷ್ಮ ನೀರಾವರಿ ಪರಿಕರಗಳ ಗುಣಮಟ್ಟ ಪರೀಕ್ಷಣ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ 75 ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು(Bengaluru GKVK)) 11ನೇ ಸ್ಥಾನದಲ್ಲಿದೆ. ಜೊತೆಗೆ ನ್ಯಾಕ್ (NAAC) ಸಂಸ್ಥೆಯಿಂದ ಎ ಪ್ಲಸ್ ಶ್ರೇಣಿ ಪಡೆದುಕೊಂಡಿದೆ ಮಾತ್ರವಲ್ಲದೆ ಎನ್ಐಆರ್ಎಫ್ (NIRF) ರ್ಯಾಂಕಿಂಗ್ನಲ್ಲಿಯೂ 11ನೇ ಸ್ಥಾನ ದೊರಕಿದೆ ಎಂದು ಹೇಳಿದರು.
ಈ ಎಲ್ಲ ಸಾಧನೆಗಳು ವಿಶ್ವವಿದ್ಯಾನಿಲಯವು ಕಳೆದ 60 ವರ್ಷಗಳಲ್ಲಿ ಸಾಗಿಬಂದಿರುವ ಹಾದಿಗೆ ಸಾಕ್ಷಿಯಾಗಿದೆ. ವಿಶ್ವವಿದ್ಯಾನಿಲಯದ ಬೆಳವಣಿಗೆಗೆ ಅನೇಕ ಕುಲಪತಿಗಳು ಪ್ರಾಧ್ಯಾಪಕರುಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಕೃಷಿ ವಿವಿ ಇತಿಹಾಸ
1899ರಲ್ಲಿ ಮೈಸೂರಿನ ಮಹಾರಾಣಿ ಕೆಂಪ ನಂಜಮ್ಮ ಅವರು ಕೃಷಿ ಸಂಸ್ಥೆ ಸ್ಥಾಪನೆಗಾಗಿ ಹೆಬ್ಬಾಳದಲ್ಲಿ 30 ಎಕರೆ ಭೂಮಿ ನೀಡಿದರು. ಲೆಸ್ಲಿ ಕೋರ್ಲ್ಡ್ ನ್ ಎಂಬ ಬ್ರಿಟಿಷ್ ಅಧಿಕಾರಿ 25 ವರ್ಷಗಳ ಕಾಲ ಕೆಲಸ ಮಾಡಿ, ಈ ಕೃಷಿ ಸಂಸ್ಥೆಯನ್ನು ಕೃಷಿ ಸಂಶೋಧನಾ ಸಂಸ್ಥೆಯಾಗಿ ಪರಿವರ್ತಿಸಿದರು.
ನಂತರ, ಮೈಸೂರಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ನವರು 1913ರಲ್ಲಿ ಇದನ್ನು ಕೃಷಿ ಕಾಲೇಜು ಆಗಿ ಮಾರ್ಪಡಿಸಿದರು. ಈ ವೇಳೆ ಕೃಷಿ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಲಾಯಿತು. ಹೀಗಾಗಿ, ಬೆಂಗಳೂರು ಕೃಷಿ ವಿವಿಯ ಅಡಿಪಾಯ ಬಹಳ ಗಟ್ಟಿಯಾಗಿದೆ. ಈ ಕಾರಣಕ್ಕಾಗಿಯೇ ಇದು ಇಡೀ ದೇಶದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿ ಬೆಳೆದು ನಿಂತಿದೆ ಎಂದು ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.
ಬೆಂಗಳೂರು ಕೃಷಿ ವಿವಿಯು(Bengaluru GKVK)ಕೃಷಿಯಲ್ಲಿ ಅನೇಕ ಸಂಶೋಧನೆಗಳನ್ನು ಕೈಗೊಂಡು, ಅದರ ಪ್ರಯೋಜನವನ್ನು ರೈತರಿಗೆ ಕೊಡುಗೆಯಾಗಿ ಕೊಟ್ಟಿದೆ. ಕೃಷಿ ವಿವಿಯು 60 ವರ್ಷ ಸಾಗಿ ಬಂದ ದಾರಿ ಸುಗಮವಾಗಿರಲಿಲ್ಲ ಎಂದೂ ಅವರು ಹೇಳಿದರು.
ಪದವೀಧರರು ವಿವಿಯ ರಾಯಭಾರಿಗಳು
ಕೃಷಿ ವಿಶ್ವವಿದ್ಯಾನಿಲಯದಿಂದ ಹೊರಬರುವ ಪದವೀಧರರೇ ವಿಶ್ವವಿದ್ಯಾನಿಲಯದ ರಾಯಭಾರಿಗಳು. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ದೇಶದ ಬೇರೆಬೇರೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸರ್ಕಾರಿ ನೌಕರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿರುವುದು ಕರ್ನಾಟಕಕ್ಕೆ ಕೀರ್ತಿ ತಂದಿದೆ ಎಂದು ಅವರು ಶ್ಲಾಘಿಸಿದರು.
1980ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಇಂಟರ್ನ್ಯಾಷನಲ್ ಬಟನಿಕಲ್ ಕಾಂಗ್ರೆಸ್ ಸಮಾವೇಶದಲ್ಲಿ ತಾನು ವಿದ್ಯಾರ್ಥಿಯಾಗಿ ಭಾಗವಹಿಸಿದ್ದ ಸುಮಾರು 4500 ಕೃಷಿ ವಿಜ್ಞಾನಿಗಳು ಭಾಗವಹಿಸಿದ್ದ ಆ ಸಮಾವೇಶದಲ್ಲಿ, ಭಾರತವು ಆಹಾರ ಧಾನ್ಯದಲ್ಲಿ ಸ್ವಾವಲಂಬನೆಯ ದೇಶ ಎಂದು ಘೋಷಣೆಯಾಯಿತು 60ರ ದಶಕದಲ್ಲಿ ದೇಶದ ಜನಸಂಖ್ಯೆಗೆ ಎರಡು ಹೊತ್ತು ನೀಡಲು ಸಾಧ್ಯವಾಗುತ್ತಿರಲಿಲ್ಲ ಆದರೆ, 20 ವರ್ಷಗಳಲ್ಲಿ ದೇಶವು ಆಹಾರ ಧಾನ್ಯದಲ್ಲಿ ಸ್ವಾವಲಂಬನೆ ಸಾಧಿಸಿತು ಎಂದು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಹೇಳಲಾಗುತ್ತದೆ. ಇದಕ್ಕೆ ನಮ್ಮ ರೈತರು, ವಿಜ್ಞಾನಿಗಳ ಪ್ರಯತ್ನ ದೊಡ್ಡದಿದೆ
ಹಸಿರು ಕ್ರಾಂತಿ ಸುಮ್ಮನೆ ಆಗಿಲ್ಲ ದೇಶದ ಕೃಷಿ ವಿಜ್ಞಾನಿಗಳು ಮಾಡಿದ ಸಾಧನೆಯಿಂದಾಗಿ ಇಂದು ಆಹಾರ ಧಾನ್ಯದಲ್ಲಿ ನಾವು ಸ್ವಾವಲಂಬನೆ ಪಡೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.’
ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್ ವಿ ಸುರೇಶ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮತ್ತು ಆಡಳಿತ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಾದ ಡಾ.ಕೆ.ಸಿ. ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
