ಬೆಂಗಳೂರು: ನಗರದ ಹೃದಯಭಾಗದಲ್ಲಿ ಇತ್ತೀಚೆಗೆ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ಹಗಲು ದರೋಡೆ(ATM Robbery) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ದಕ್ಷಿಣ ವಿಭಾಗದ ಪೊಲೀಸರ ತನಿಖಾ ಜಾಲ ಇದೀಗ ಬಿಚ್ಚಿಕೊಂಡಿದ್ದು, ಕದ್ದ ಹಣದಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಚೆನ್ನೈ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ವಶಪಡಿಸಿಕೊಂಡಿದ್ದಾರೆ. ದರೋಡೆಯ ಹಿಂದಿನ ಕಥೆ ಕೇಳಿದವರಿಗೆ ಅಚ್ಚರಿ ಕಾದಿದೆ-ಈ ಸಂಚಿನ ಸೂತ್ರಧಾರ ಬೇರೆ ಯಾರೂ ಅಲ್ಲ, ಸ್ವತಃ ಬೆಂಗಳೂರು ನಗರದ ಒಬ್ಬ ಪೊಲೀಸ್ ಕಾನ್ಸ್ಟೆಬಲ್!
‘ರಕ್ಷಕ’ನಾದವನೇ, ‘ಭಕ್ಷಕನಾದ’:
ಈ ದರೋಡೆಯ(ATM Robbery) ಹಿಂದೆ ಇದ್ದ ಮಾಸ್ಟರ್ ಮೈಂಡ್, ನಗರ ಪೂರ್ವ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಪೊಲೀಸ್ ಕಾನ್ಸ್ಟೆಬಲ್ ಎಂದು ತಿಳಿದು ಬಂದಿದೆ. ಆತ ಮತ್ತು ಆತನ ಕೇರಳ ಮೂಲದ ನಗದು ನಿರ್ವಹಣಾ ಸೇವೆಗಳ (CMS) ಮಾಜಿ ಉದ್ಯೋಗಿ ಆಪ್ತ ಸ್ನೇಹಿತರು ಸೇರಿಕೊಂಡು ಈ ಕುಕೃತ್ಯ ಮಾಡಿದ್ದಾರೆ. ಸಿಎಂಎಸ್ ಉದ್ಯೋಗಿ ಕೆಲಸ ಬಿಟ್ಟ ನಂತರ ಕಳೆದ ಆರು ತಿಂಗಳಿನಿಂದ ಈ ಇಬ್ಬರು ಈ ಬೃಹತ್ ದರೋಡೆ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಜೈಲು ಸಂಪರ್ಕ ಮತ್ತು ಸಹೋದರರ ಪಾತ್ರ
ಈ ಸಂಚಿಗೆ ಬೆಂಬಲ ನೀಡಿದ ಇತರ ಮೂವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆದರೆ, ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ಸಹೋದರರು ಇನ್ನೂ ಪೊಲೀಸರ ಕಣ್ಯಾವಲಿನಲ್ಲಿದ್ದಾರೆ. ಮಾಜಿ ಸೈನಿಕನ ಪುತ್ರರಾದ ಈ ಸಹೋದರರು ಆಂಧ್ರಪ್ರದೇಶದ ಚಿತ್ತೂರಿನ ಮೂಲದವರು.
ಅಚ್ಚರಿಯ ಸಂಗತಿಯೆಂದರೆ, ಈ ಕಾನ್ಸ್ಟೆಬಲ್ಗೆ ಈಗಾಗಲೇ ಕ್ರಿಮಿನಲ್ ಹಿನ್ನೆಲೆ ಇತ್ತು. ನಗರದ ಹೊರವಲಯದ ಹಳೆಯ ಅಪರಾಧ ಪ್ರಕರಣವೊಂದರಲ್ಲಿ ಈತ ಹಿಂದೆ ಬಂಧಿತನಾಗಿದ್ದ. ಜೈಲಿನಲ್ಲಿ ಇದ್ದ ಸಮಯದಲ್ಲಿ, ಈತ ಕೆಲವು ಕ್ರಿಮಿನಲ್ಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಈ ದರೋಡೆಯಲ್ಲೂ ಜೈಲಿನ ಹಳೇ ಪರಿಚಿತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೂ ಭೇಟಿ ನೀಡಿದ್ದಾರೆ.
ದರೋಡೆಗಾಗಿ ಬಳಸಿದ ಇನ್ನೋವಾ ಎಸ್ಯುವಿಯ ರೂಟ್ಮ್ಯಾಪ್ ಅನ್ನು ಸಹ ಕಾನ್ಸ್ಟೆಬಲ್ ನೀಡಿದ್ದ. ಕಳ್ಳತನಕ್ಕೆ ಬಳಸಿದ ನಕಲಿ ವಾಹನದ ನಂಬರ್ ಪಡೆಯಲು, ಗಸ್ತು ಕರ್ತವ್ಯದಲ್ಲಿದ್ದಾಗ ಮನೆಯೊಳಗೆ ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ನೋಂದಣಿ ಸಂಖ್ಯೆಯನ್ನು ಬಳಸಿದ್ದ ಎಂದು ತಿಳಿದುಬಂದಿದೆ.
ಗೃಹ ಸಚಿವರ ಮೌನ: ತನಿಖೆಯ ಗೋಪ್ಯತೆ
ಈ ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ ಮತ್ತು ಹಣವೂ ವಶವಾಗಿದೆ ಎಂದು ದೃಢಪಡಿಸಿದರು. ಆದರೆ, ತನಿಖೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಅವರು ನಿರಾಕರಿಸಿದರು. “ಇಂತಹ ದೊಡ್ಡ ಪ್ರಕರಣಗಳಲ್ಲಿ ನಾವು ಸಮಯದ ಮಿತಿ ನಿಗದಿಪಡಿಸುವುದಿಲ್ಲ” ಎಂದು ಅವರು ಪೊಲೀಸರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.
ಇದೀಗ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಿ. ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳುವ ಸವಾಲು ಪೊಲೀಸರ ಮುಂದಿದೆ.(ATM Robbery)
