ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ಮತ್ತೊಮ್ಮೆ ತಮ್ಮ ದೈಹಿಕ ಶಕ್ತಿಯನ್ನು ಸಾಬೀತು ಮಾಡಿದ್ದಾರೆ. ಸತತ ಎರಡನೇ ವರ್ಷವೂ ಗೋವಾದಲ್ಲಿ ನಡೆದ ‘ಐರನ್ ಮ್ಯಾನ್ 70.3’ ಎಂಬ ಕಠಿಣ ಓಟವನ್ನು ಯಶಸ್ವಿಯಾಗಿ ಮುಗಿಸಿದ ಅವರ ಸಾಧನೆಗೆ, ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಮಾಡಿ ಪತಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಎರಡನೇ ಬಾರಿ ಐರನ್ಮ್ಯಾನ್ ವಿಜಯೋತ್ಸವ
ಎರಡನೇ ಬಾರಿ ಈ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಪತಿಯನ್ನು ‘ಮ್ಯಾನ್ ಆಫ್ ಸ್ಟೀಲ್’ ಎಂದು ಬಣ್ಣಿಸಿದ ಶಿವಶ್ರೀ, ಈ ಬಾರಿ ಅವರು ಹಿಂದಿನ ಬಾರಿಗಿಂತ 40 ನಿಮಿಷ ಕಡಿಮೆ ಸಮಯದಲ್ಲಿ ಗುರಿ ತಲುಪಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ತೇಜಸ್ವಿ ಸೂರ್ಯ ಅವರು 19 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು
21.1 ಕಿ.ಮೀ ಓಟವನ್ನು ಒಟ್ಟು 7 ಗಂಟೆ 49 ನಿಮಿಷಗಳಲ್ಲಿ ಪೂರೈಸಿದ್ದಾರೆ. ಈ ಸಾಧನೆಯು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.
‘ನೀವೇ ನನ್ನ ಬೆಸ್ಟ್ ಕೋಚ್
ಶಿವಶ್ರೀ ಅವರು ತಮ್ಮ ಪತಿಯನ್ನು ಕೇವಲ ಒಬ್ಬ ಸಂಸದನಾಗಿ ಅಲ್ಲ ಬದಲಿಗೆ ತಮ್ಮ ವೈಯಕ್ತಿಕ ಕೋಚ್ ಮತ್ತು ಅತಿದೊಡ್ಡ ಪ್ರೇರಣೆ ಎಂದು ಬಣ್ಣಿಸಿದ್ದಾರೆ.(Tejasvi Surya) “ನಾನು ಈಗ ಮಾಡುತ್ತಿರುವ ಕೆಲಸಗಳಿಗೆ ಇನ್ಯಾರೂ ನನಗೆ ಇಷ್ಟೊಂದು ಪ್ರೇರಣೆ ನೀಡಲಾರರು ನೀವು ನನಗೆ ಸಿಕ್ಕ ಅತ್ಯುತ್ತಮ ವ್ಯಕ್ತಿ ಮತ್ತು ನೀವು ಯಾವಾಗಲೂ ನನ್ನ ಬೆನ್ನ ಹಿಂದೆ ಬೆಂಬಲವಾಗಿ ಇದ್ದೀರಿ ಎಂಬುದು ನನಗೆ ಗೊತ್ತಿದೆ,” ಎಂದು ಪತಿಯ ಮೇಲಿನ ತಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಶಿವಶ್ರೀ ಮತ್ತು ಅಣ್ಣಾಮಲೈ ಅವರಿಂದಲೂ ಸ್ಪರ್ಧೆ
ಈ ಕಠಿಣ ಸ್ಪರ್ಧೆಯಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರು ಕೂಡ ಭಾಗವಹಿಸಿ 90 ಕಿ.ಮೀ. ಸೈಕ್ಲಿಂಗ್ ವಿಭಾಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೂಡಾ ಓಟದಲ್ಲಿ ಭಾಗಿಯಾಗಿದ್ದು, 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಪ್ರಧಾನಿ ಮೋದಿಯಿಂದಲೂ ಪ್ರಶಂಸೆ
ಈ ಯುವ ನಾಯಕರ ದೈಹಿಕ ಸಾಮರ್ಥ್ಯದ ಸಾಧನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸಂತೋಷ ವ್ಯಕ್ತಪಡಿಸಿದ್ದರು. “ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಐರನ್ಮ್ಯಾನ್ ಓಟದಲ್ಲಿ ಭಾಗವಹಿಸುವುದು #Fitindia ಆಂದೋಲನಕ್ಕೆ ದೊಡ್ಡ ಕೊಡುಗೆ,” ಎಂದು ಮೋದಿ ಅವರು ಶ್ಲಾಘಿಸಿ, ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದರು.
