ಸುಬ್ರಹ್ಮಣ್ಯ :ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಹಾಗೂ ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ 2018ರ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನu ಪರಿಷ್ಕರಣೆ ಮಾಡುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗೆ 2018ರಿಂದ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಸೂಚನೆ ನೀಡಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮತ್ತು ಏಕ ಸದಸ್ಯ ಪೀಠದ ಆದೇಶ ಜಾರಿ ಮಾಡದ ಸರ್ಕಾರದ ಕ್ರಮ ಪ್ರಶ್ನಿಸಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಕೆ.ಸಿ. ಉದಯ್ ಕುಮಾರ್ ಸೇರಿ ಮತ್ತಿತರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ 2018ರಿಂದ ಅನ್ವಯವಾಗುವಂತೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಿ ಪಾವತಿ ಮಾಡಬೇಕು ಎಂದು ಆದೇಶಿಸಿರುವ ಏಕ ಸದಸ್ಯ ಪೀಠದ ಆದೇಶವನ್ನು ಮುಂದಿನ ಎಂಟು ವಾರಗಳಲ್ಲಿ ಜಾರಿ ಮಾಡಬೇಕೆಂದು ನಿರ್ದೇಶನ ನೀಡಿದ ನ್ಯಾಯಪೀಠ, ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಈ ಆದೇಶವನ್ನು ಪಾಲಿಸದಿದ್ದಲ್ಲಿ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿರಲಿದೆ ಎಂದು ತಿಳಿಸಿದ ನ್ಯಾಯಪೀಠ, ಸಿಬ್ಬಂದಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ಜತೆಗೆ, ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ 210 ದಿನಗಳ ಕಾಲ ವಿಳಂಬವಾಗಿ ಮೇಲ್ಮನವಿ ಸಲ್ಲಿಸಿದೆ. ಅದಕ್ಕೆ ಸಕಾರಣವನ್ನೂ ನೀಡಿಲ್ಲ. ಅಲ್ಲದೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು 2018ರಿಂದ ಅನ್ವಯವಾಗುವಂತೆ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪಾವತಿಸಬೇಕು ಎಂಬುದಾಗಿ ತಿಳಿಸಿದ್ದಾರೆ.
ಜತೆಗೆ, ಕರ್ನಾಟಕ ಹಿಂದೂ ಧಾರ್ಮಿ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆಯಡಿಲ್ಲಿ ಎ ದರ್ಜೆಯ ದೇವಸ್ಥಾನದಲ್ಲಿರುವ ಇತರೆ ಸಿಬ್ಬಂದಿಗೆ 2018ರಿಂದಲೇ ವೇತನ ಪರಿಷ್ಕರಣೆ ಮಾಡಿದ್ದು, ಈ ದೇವಸ್ಥಾನದ ಸಿಬ್ಬಂದಿಗೆ ಮಾತ್ರ ವಿಳಂಬ ಮಾಡಲಾಗಿದೆ. ಆದ್ದರಿಂದ 2018 ರಿಂದಲೇ ವೇತನ ಪರಿಷ್ಕರಿಸಿ ಪಾವತಿಸುವಂತೆ ಏಕ ಸದಸ್ಯ ಪೀಠ ಆದೇಶ ಸೂಕ್ತವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ರಾಜ್ಯ ಮುಜರಾಯಿ ಇಲಾಖೆಯಿಂದ ಎ ದರ್ಜೆಯಲ್ಲಿ ಅಧಿಸೂಚಿತ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗೆ 2018ರ ಅಕ್ಟೋಬರ್ ತಿಂಗಳಿನಿಂದ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ಇತರೆ ಎ ದರ್ಜೆಯ ದೇವಸ್ಥಾನಗಳ ಸಿಬ್ಬಂದಿಗೆ 2018ರ ಏಪ್ರಿಲ್ ತಿಂಗಳಿನಿಂದಲೇ ವೇತನ ಪರಿಷ್ಕರಣೆ ಮಾಡಿತ್ತು.
ಇದನ್ನು ಪ್ರಶ್ನಿಸಿ ದೇವಸ್ಥಾನದ ಸುಮಾರು 200ಕ್ಕೂ ಹೆಚ್ಚು ಜನ ಸಿಬ್ಬಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಇತರೆ ದೇವಸ್ಥಾನಗಳ ಮಾದರಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗೂ 2018ರಿಂದಲೇ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಿ ವೇತನ ಪಾವತಿಸಲು 2024ರ ಮಾರ್ಚ್ 20ರಂದು ನಿರ್ದೇಶನ ನೀಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಆದೇಶ ಜಾರಿ ಮಾಡದ ಸರ್ಕಾರದ ಕ್ರಮ ಪ್ರಶ್ನಿಸಿ ದೇವಸ್ಥಾನದ ಸಿಬ್ಬಂದಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ವೇಳೆ ಅರ್ಜಿದಾ(ಸರ್ಕಾರ)ರರ ಪರ ವಕೀಲರು, ಸಿಬ್ಬಂದಿಗೆ ವೇತನವನ್ನು ಕಡಿತಗೊಳಿಸುವುದು ಸರ್ಕಾರದ ವಿಶೇಷ ಹಕ್ಕು ಆಗಿರಲಿದೆ. ಈ ಅಂಶವನ್ನು ಪರಿಗಣಿಸದೆ ಏಕ ಸದಸ್ಯ ಪೀಠ ಈ ಆದೇಶ ನೀಡಿದ್ದು, ರದ್ದುಪಡಿಸಬೇಕು ಎಂದು ಕೋರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಯ ಪರ ವಕೀಲರು, ಕರ್ನಾಟಕ ಹಿಂದೂ ಧಾರ್ಮಿ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆಯಡಿಲ್ಲಿ ಎ ದರ್ಜೆಯ ದೇವಸ್ಥಾನದ ಎಂಬುದಾಗಿ ಗುರುತಿಸಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಸಿಬ್ಬಂದಿಗೆ 2018ರಿಂದ ಆರನೇ ವೇತನ ಆಯೋಗದ ಶಿಫಾರಸಿನ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಿದೆ. ಆದರೆ, ಕುಕ್ಕೆ ದೇವಸ್ಥಾನದ ಸಿಬ್ಬಂದಿಗೆ 2021ರಿಂದ ವೇತನ ಪರಿಷ್ಕರಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಏಕ ಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠಕ್ಕೆ ಮನವಿ ಮಾಡಿದರು.
