
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪದೇಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಇದೀಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಮವಾರ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.
ರಾಜಣ್ಣ ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬದಲಾವಣೆ, ಚುನಾವಣಾ ಆಯೋಗದ ವಿರುದ್ಧದ ರಾಹುಲ್ ಗಾಂಧಿಯವರ ಆರೋಪ ಮೊದಲಾದ ವಿಷಯಗಳಲ್ಲಿ ಪಕ್ಷಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದರು. ರಾಜ್ಯದಲ್ಲಿ “ಸೆಪ್ಟೆಂಬರ್ ಕ್ರಾಂತಿ” ನಡೆಯಲಿದೆ ಎಂಬ ಹೇಳಿಕೆ ಕೂಡ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಹಿರಿಯ ನಾಯಕರ ಎಚ್ಚರಿಕೆಯನ್ನೂ ಲೆಕ್ಕಿಸದೇ, ನಾಯಕತ್ವ ಬದಲಾವಣೆ ಕುರಿತ ಅಭಿಪ್ರಾಯವನ್ನು ಪದೇಪದೇ ಪುನರಾವರ್ತಿಸಿದ ಕಾರಣ, ಅವರ ವರ್ತನೆ ಹೈಕಮಾಂಡ್ ಕಣ್ಗೆ ತಟ್ಟಿತು.
ಇದಕ್ಕೂ ಮುನ್ನ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸಲಾಗಿತ್ತು. ಈ ಕ್ರಮವೇ ಮುಂದಿನ ಬೆಳವಣಿಗೆಗೆ ಬುನಾದಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ: Movie Review: ಹರೆಯದ ಮನಸ್ಸುಗಳ ತುಡಿತವನ್ನು ಅರಿತಿರುವ ‘ಗಂಟುಮೂಟೆ’
ರಾಹುಲ್ ಗಾಂಧಿ ಆರೋಪಕ್ಕೆ ವಿರುದ್ಧವಾಗಿ ಹೇಳಿಕೆ ಮುಳುವಾಯ್ತು..!
ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಮಹದೇವಪುರ ಸೇರಿದಂತೆ ಹಲವೆಡೆ ಮತಕಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ರಾಜಣ್ಣ ಪಕ್ಷದ ನಿಲುವಿಗೆ ವಿರುದ್ಧವಾಗಿ ಪ್ರತಿಕ್ರಿಯೆ ನೀಡಿದ್ದರು.
“ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿದ್ದಲ್ಲವಾ? ಆಗ ಎಲ್ಲರೂ ಕಣ್ಮುಚ್ಚಿ ಕುಳಿತಿದ್ರಾ?” ಎಂದು ಪ್ರಶ್ನಿಸಿ, ಮತ್ತಷ್ಟು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.
ಹೈಕಮಾಂಡ್ ಸೂಚನೆ ಮೇರೆಗೆ ರಾಜಣ್ಣ ಈಗ ಸಚಿವ ಸ್ಥಾನದಿಂದ ಹಿಂದೆ ಸರಿದಿದ್ದು, ಮುಂದಿನ ರಾಜಕೀಯ ಹೆಜ್ಜೆ ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬ ಕುತೂಹಲ ಉಂಟಾಗಿದೆ.
