
Government Car Controversy: ನಮ್ಮಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನಾವು ಕಾಣುತ್ತಿರುತ್ತೇವೆ. ಆದರೆ ಇಲ್ಲೊಬ್ಬ ನಟಿಮಣಿ ಜ್ಯುವೆಲರಿ ಶಾಪ್ ಉದ್ಘಾಟನೆಗಾಗಿ ಸರ್ಕಾರಿ ಕಾರು ಬಳಸಿರುವ ಘಟನೆ ನಡೆದಿದೆ.
ಹೌದು ಟಾಲಿವುಡ್(Tollywood) ನಟಿ ನಿಧಿ ಅಗರ್ವಾಲ್ (Nidhi Agarwal) ಆಂಧ್ರದ ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಸರ್ಕಾರಿ ಕಾರಿನಲ್ಲಿ ಆಗಮಿಸಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಇದು ರಾಜಕೀಯ ಮತ್ತು ಚಿತ್ರರಂಗದ ನಡುವಿನ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಮತ್ತಷ್ಟು ವಿವರ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಚಿತ್ರರಂಗದ ನಡುವಿನ ನಂಟು ಹೆಚ್ಚಾಗುತ್ತಿದ್ದು, ಹಲವು ಭ್ರಷ್ಟಾಚಾರದ ಪ್ರಕರಣಗಳಲ್ಲಿ ರಾಜಕಾರಣಿಗಳ ಜೊತೆ ಸೆಲೆಬ್ರಿಟಿಗಳ ಹೆಸರುಗಳು ಕೇಳಿ ಬರುತ್ತಿವೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ, ಅಧಿಕಾರ ಮತ್ತು ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳುವ ಈ ಪ್ರವೃತ್ತಿ, ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ತೆಲುಗು ಚಿತ್ರರಂಗದ ಖ್ಯಾತ ನಟಿ ನಿಧಿ ಅಗರ್ವಾಲ್ ಅವರ ಪ್ರಕರಣವೇ ಇದಕ್ಕೆ ಉತ್ತಮ ಉದಾಹರಣೆ.
ಸರ್ಕಾರಿ ಕಾರು ವಿವಾದದ ಸುತ್ತಮುತ್ತ
ತೆಲುಗು ನಟಿ ನಿಧಿ ಅಗರ್ವಾಲ್, ಇತ್ತೀಚೆಗೆ ಭೀಮಾವರಂನಲ್ಲಿರುವ ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ತೆರಳಿದ್ದರು. ಹೈದರಾಬಾದ್ನಿಂದ ವಿಜಯವಾಡಕ್ಕೆ ವಿಮಾನದಲ್ಲಿ ಬಂದಿಳಿದ ನಿಧಿ, ವಿಜಯವಾಡದಿಂದ ಭೀಮಾವರಂಗೆ ತೆರಳಲು ‘On Govt Duty. AP 39 TA 5303‘ ಎಂಬ ಬೋರ್ಡ್ ಇದ್ದ ಸರ್ಕಾರಿ ಕಾರನ್ನು ಬಳಸಿದ್ದಾರೆ. ವೈಯಕ್ತಿಕ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನವನ್ನು ಬಳಸಿದ ಈ ಘಟನೆ ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯ ಕುರಿತು ಆಂಧ್ರಪ್ರದೇಶದ ಹಲವು ರಾಜಕೀಯ ಪಕ್ಷಗಳು ಕೂಡ ಪ್ರಶ್ನೆಗಳನ್ನು ಎತ್ತಿವೆ. ಒಬ್ಬ ನಟಿಗೆ ಸರ್ಕಾರಿ ವಾಹನವನ್ನು ಹೇಗೆ ನೀಡಲಾಗಿದೆ ಮತ್ತು ಅಧಿಕಾರಿಗಳು ತಮ್ಮ ಅಧಿಕಾರವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವುದು ಸರಿಯೇ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಆದೇಶಕ್ಕೆ ಕಿಚ್ಚನ ಟ್ವೀಟ್: ಬೀದಿ ನಾಯಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ
ಕೆಲವರು ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದು, ಈ ಘಟನೆಯಲ್ಲಿ ಅವರ ಪಾತ್ರ ಇರಬಹುದೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.
ನಿಧಿ ಅಗರ್ವಾಲ್ ಸಮಜಾಯಿಶಿ
ವಿವಾದ ಹೆಚ್ಚಾದ ಬೆನ್ನಲ್ಲೇ ನಟಿ ನಿಧಿ ಅಗರ್ವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಯಾವ ಸರ್ಕಾರಿ ಅಧಿಕಾರಿಯೂ ನನಗೆ ವಾಹನ ಕಳುಹಿಸಿಲ್ಲ, ಬದಲಿಗೆ ಕಾರ್ಯಕ್ರಮದ ಆಯೋಜಕರು ಈ ವಾಹನವನ್ನು ವ್ಯವಸ್ಥೆ ಮಾಡಿದ್ದರು’ ಎಂದು ಹೇಳಿದ್ದಾರೆ. ಆಂಧ್ರಪ್ರದೇಶ ಸರ್ಕಾರದಲ್ಲಿರುವ ಯಾರಿಗೂ ಮತ್ತು ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ, ನಟಿಯ ಈ ಸ್ಪಷ್ಟನೆಯ ನಡುವೆಯೂ ವಿವಾದ ತಣ್ಣಗಾಗುವ ಲಕ್ಷಣಗಳು ಕಂಡುಬಂದಿಲ್ಲ.
ಇದನ್ನೂ ಓದಿ: Movie Review: ಹರೆಯದ ಮನಸ್ಸುಗಳ ತುಡಿತವನ್ನು ಅರಿತಿರುವ ‘ಗಂಟುಮೂಟೆ’
ನಿಧಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ
ನಟಿ ನಿಧಿ ಅಗರ್ವಾಲ್ ಸದ್ಯ ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾಳವಿಕಾ ಮೋಹನನ್ ಮತ್ತು ನಯನತಾರಾ ಕೂಡ ಈ ಚಿತ್ರದಲ್ಲಿ ಇರುವುದು ಮತ್ತಷ್ಟು ಆಕರ್ಷಣೆ ಹೆಚ್ಚಿಸಿದೆ. ನಿರ್ದೇಶಕ ಮಾರುತಿ ನಿರ್ದೇಶನದ ಈ ಚಿತ್ರ, ನಿಧಿಗೆ ದೊಡ್ಡ ಯಶಸ್ಸು ತಂದುಕೊಡಬಹುದೆಂಬ ನಿರೀಕ್ಷೆ ಇದೆ.
ಇತ್ತೀಚೆಗೆ ಅವಕಾಶಗಳ ಕೊರತೆಯನ್ನು ಎದುರಿಸುತ್ತಿರುವ ಮತ್ತು ‘ಹರಿಹರ ವೀರಮಲ್ಲು’ ಚಿತ್ರದ ವೈಫಲ್ಯದ ನಂತರ, ನಿಧಿಗೆ ‘ದಿ ರಾಜಾ ಸಾಬ್’ ಒಂದು ಪ್ರಮುಖ ಮತ್ತು ನಿರ್ಣಾಯಕ ಸಿನಿಮಾ ಎನಿಸಿದೆ. ಹಾಗಾಗಿ, ಈ ವಿವಾದ ಅವರ ಸಿನಿ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
