ಬೆಂಗಳೂರು: ಐಟಿ ಸಿಟಿ ಬೆಂಗಳೂರು ಈಗ ಮತ್ತೊಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ದಿನೇ ದಿನೇ ಕುಸಿಯುತ್ತಿರುವ ವಾಯು ಗುಣಮಟ್ಟವು (Bengaluru Air Quality) ನಗರದ ಜನರ ಆರೋಗ್ಯಕ್ಕೆ ಬಹುದೊಡ್ಡ ಸವಾಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದೆ ದೆಹಲಿಯಲ್ಲಿರುವಂತೆ ಇಲ್ಲಿಯೂ ಶುದ್ಧ ಗಾಳಿಗಾಗಿ ಪರದಾಡಬೇಕಾಗಬಹುದು ಎಂದು ಪರಿಸರ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ (ಡಿಸೆಂಬರ್ 12) ನಗರದ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 175 ರಷ್ಟಿತ್ತು. ಆದರೆ, ಇಂದು ಈ ಸೂಚ್ಯಂಕವು 186 ರಿಂದ 206ರ ಗಡಿಯನ್ನು ದಾಟಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಇದು ಉಸಿರಾಟದ ಸಮಸ್ಯೆ ಇರುವವರಿಗೆ ತೀವ್ರ ಬಿಕ್ಕಟ್ಟನ್ನು ತಂದೊಡ್ಡಲಿದೆ.
‘ಅನಾರೋಗ್ಯಕರ’ ಮಟ್ಟ ದಾಟಿದ ಗಾಳಿಯ ಕ್ಯಾಲಿಟಿ
ವಾಯುಮಾಲಿನ್ಯದ ಗುಣಮಟ್ಟ 200ರ ಗಡಿ ದಾಟಿದೆ ಎಂದರೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂಬುದಕ್ಕೆ
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಗಾಳಿಯಲ್ಲಿ PM2.5 (ಸೂಕ್ಷ್ಮ ಕಣಗಳು) ಪ್ರಮಾಣವು 5ಕ್ಕಿಂತ ಹೆಚ್ಚಿದ್ದರೆ ಅದು ಜನರಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಭಾರತೀಯ ಸುರಕ್ಷಾ ಮಿತಿಗಳ ಪ್ರಕಾರ, PM2.5 ಪ್ರಮಾಣವು 40ಕ್ಕಿಂತ ಕಡಿಮೆ ಇದ್ದರೆ ಮಾತ್ರ ಸ್ವೀಕಾರಾರ್ಹ. ಹಾಗೆಯೇ, PM10 ಪ್ರಮಾಣವು 50 ಮೈಕ್ರೋಗ್ರಾಮ್ ಗಳವರೆಗೆ ಇರಬಹುದು.
ದುರದೃಷ್ಟವಶಾತ್, ಇಂದು ಬೆಂಗಳೂರಿನ ಗಾಳಿಯ ಗುಣಮಟ್ಟ(Bengaluru Air Quality) 200ರ ಗಡಿ ದಾಟಿರುವ ಕಾರಣ, ಉಸಿರಾಟದ ತೊಂದರೆ ಮತ್ತು ಆಸ್ತಮಾ ಇರುವ ನಾಗರಿಕರು ಅತ್ಯಂತ ಜಾಗರೂಕರಾಗಿರಬೇಕಿದೆ. ಇಂದು ನಗರದಲ್ಲಿ PM2.5 ಪ್ರಮಾಣ 95 ಮೈಕ್ರೋಗ್ರಾಮ್ಗೆ ಹಾಗೂ PM10 ಪ್ರಮಾಣ 96ಕ್ಕೆ ಏರಿದೆ. ಈ ಎರಡೂ ಪ್ರಮಾಣಗಳು ಸುರಕ್ಷಾ ಮಿತಿಗಿಂತ ದುಪ್ಪಟ್ಟಾಗಿವೆ.
ದೂಳಿನ ಕಣಗಳೇ ಆರೋಗ್ಯಕ್ಕೆ ಕಂಟಕ!
PM (Particulate Matter) ಎಂದರೆ ಗಾಳಿಯಲ್ಲಿ ತೇಲಾಡುವ ಸೂಕ್ಷ್ಮ ಕಣಗಳು.
PM2.5 ಕಣಗಳು ಮುಖ್ಯವಾಗಿ ವಾಹನಗಳಿಂದ ಹೊರಸೂಸುವ ಹೊಗೆ, ಕೈಗಾರಿಕಾ ಹೊಗೆ ಮತ್ತು ಇಂಧನಗಳ ದಹನದಿಂದ ಉತ್ಪತ್ತಿಯಾಗುತ್ತವೆ.
PM10 ಕಣಗಳು ನಿರ್ಮಾಣ ಕಾರ್ಯಗಳ ಧೂಳು (Construction dust) ಮತ್ತು ಪರಾಗದಂತಹ ಮೂಲಗಳಿಂದ ಬರುತ್ತವೆ.
ಈ ಎರಡೂ ಕಣಗಳ ಪ್ರಮಾಣ ಮಿತಿ ಮೀರಿದಾಗ ಸಾರ್ವಜನಿಕರಲ್ಲಿ ಆಸ್ತಮಾ, ಉಬ್ಬಸದಂತಹ ಗಂಭೀರ ಉಸಿರಾಟದ ತೊಂದರೆಗಳು ಎದುರಾಗುತ್ತವೆ. ಕೇವಲ ಈ ಕಣಗಳಷ್ಟೇ ಅಲ್ಲದೆ, ಕಾರ್ಬನ್ ಮೊನಾಡ್. ಓಜೋನ್ ಮತ್ತು ನೈಟ್ರೋಜನ್ ಡೈ ಆಕ್ರೈಡ್ಗಳ ಪ್ರಮಾಣ ಹೆಚ್ಚಳವೂ ಗಾಳಿಯನ್ನು ಉಸಿರಾಡಲು ಅನರ್ಹವನ್ನಾಗಿಸುತ್ತವೆ. ಸದ್ಯಕ್ಕೆ ಇಡೀ ಬೆಂಗಳೂರು ಮಾತ್ರವಲ್ಲದೆ ಅರೆಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವು ಕುಸಿತ ಕಂಡಿರುವುದು ಕಳವಳಕಾರಿ.
ಗಾಳಿಯ ಗುಣಮಟ್ಟ ಸೂಚ್ಯಂಕ (AQI)
ಬೆಂಗಳೂರಿನ ಈಗಿನ ಪರಿಸ್ಥಿತಿ ಯಾವ ಹಂತದಲ್ಲಿದೆ ಎಂಬುದನ್ನು ಈ ಸೂಚ್ಯಂಕದ ಮೂಲಕ ತಿಳಿಯಬಹುದು:
| ಉತ್ತಮ | 0-50 |
| ಮಧ್ಯಮ | 50-100 |
| ಕಳಪೆ | 100-150 |
| ಅನಾರೋಗ್ಯಕರ | 150-200 (ಸದ್ಯ ಬೆಂಗಳೂರಿನ ಸ್ಥಿತಿ) |
| ಗಂಭೀರ | 200-300 (ಸದ್ಯ ಏರಿಕೆಯ ಹಂತ) |
| ಅಪಾಯಕಾರಿ 300-500 | 300-500 |
